ನವದೆಹಲಿ: ಗುಜರಾತ್ನ ಆರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಬಹಿರಂಗಗೊಂಡಿದ್ದು, ಆರು ಕಾರ್ಪೋರೇಷನ್ಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ದಾಖಲು ಮಾಡಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಬಿಜೆಪಿ ಭರ್ಜರಿ ಜಯಭೇರಿ ಭಾರಿಸುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ರೈತರ ಪ್ರತಿಭಟನೆ, ಕೋವಿಡ್-19 ವಿಚಾರವಾಗಿ ಬಿಜೆಪಿ ಮೇಲೆ ಇರುವ ತಪ್ಪು ಗ್ರಹಿಕೆ ಕೆಡವಿಹಾಕಿದೆ ಎಂದಿದ್ದಾರೆ. ಲೇಹ್-ಲಡಾಖ್ನಿಂದ ಹೈದರಾಬಾದ್ ಮತ್ತು ಗುಜರಾತ್ವರೆಗೆ ಹಲವಾರು ತಪ್ಪು ಕಲ್ಪನೆ ಬಿತ್ತಲು ಪ್ರತಿಪಕ್ಷಗಳು ಪ್ರಯತ್ನಿಸಿದ್ದವು. ಆದರೆ ಈ ಚುನಾವಣೆ ಫಲಿತಾಂಶ ಇದಕ್ಕೆ ಉತ್ತರವಾಗಿದ್ದು, ಪಶ್ಚಿಮ ಬಂಗಾಳ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ ಎಂದಿದ್ದಾರೆ.
ಮಹಾನಗರ ಪಾಲಿಕೆ ಫಲಿತಾಂಶ ಮೋದಿ ಜೀ ಅವರ ನಾಯಕತ್ವದ ವಿಕಾಸ್ ಯಾತ್ರೆ ಮುಂದುವರೆಸಿದೆ. ಇಂದಿನ ಫಲಿತಾಂಶ ಗುಜರಾತ್ನ ಅತ್ಯುತ್ತಮ ಫಲಿತಾಂಶಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಬಿಜೆಪಿ ತಾನು ಸ್ಪರ್ಧೆ ಮಾಡಿದ್ದ ಸುಮಾರು 85 ಪ್ರತಿಶತ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಕಾಂಗ್ರೆಸ್ ನೆಲಕಚ್ಚಿದೆ ಎಂದಿದ್ದಾರೆ.