ಇಟಾಹ್ (ಉತ್ತರ ಪ್ರದೇಶ): ಜಿಲ್ಲೆಯ ಲಖ್ಮಿಪುರದಲ್ಲಿ ಅಪರಿಚಿತ 20 ಜನರ ಗೊಂಪೊಂದು 24 ಗಂಟೆಗಳಲ್ಲಿ 2 ಬಾರಿ ಗೋಶಾಲೆಯ ಮೇಲೆ ದಾಳಿ ಮಾಡಿ 18 ಗೋವುಗಳನ್ನು ಕೊಂದು ಅದರ ಮಾಂಸವನ್ನು ತೆಗೆದುಕೊಂಡು ಹೋಗಿರುವ ಆಘಾತಕಾರಿ ಘಟನೆ ಬುಧವಾರ ನಡೆದಿದೆ. ಇನ್ನೂ 9 ಹಸುಗಳು ಕಾಣೆಯಾಗಿವೆ. ಅವುಗಳನ್ನೂ ವಧಿಸಿರುವ ಶಂಕೆ ವ್ಯಕ್ತವಾಗಿದೆ.
ಲಖ್ಮಿಪುರ ಗ್ರಾಮದಲ್ಲಿನ ಗೋಶಾಲೆಯ ಮೇಲೆ ಗುಂಪು ಅತಿಕ್ರಮವಾಗಿ ಪ್ರವೇಶಿಸಿ, ಗೋಶಾಲೆಯ ಬೀಗ ಮುರಿದು ಹಸುಗಳನ್ನು ವಧೆ ಮಾಡಿದೆ. ಬಳಿಕ ಮಾಂಸವನ್ನು ತಾವು ತಂದಿದ್ದ ಟ್ರಕ್ನಲ್ಲಿ ಹೇರಿಕೊಂಡು ಹೋಗಿದ್ದಾರೆ. ಇದಾದ ನಂತರ ಮತ್ತೊಮ್ಮೆ ಗೋಶಾಲೆಯ ಮೇಲೆ ಮಾಡಿ ಹಸುಗಳನ್ನು ಬಲಿ ಪಡೆದಿದ್ದಾರೆ. ಘಟನೆಯು ಮಧ್ಯರಾತ್ರಿ 1.30 ರ ಸುಮಾರಿಗೆ ನಡೆದಿದೆ. ತಡೆಯಲು ಬಂದ ಗ್ರಾಮದ ಮೂವರ ಮೇಲೆ ಗಂಭೀರ ಹಲ್ಲೆ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
"ಹತ್ಯೆಗೀಡಾದ ಪ್ರಾಣಿಗಳ ಅವಶೇಷಗಳು ಲಖ್ಮಿಪುರದ ಗೋಶಾಲೆಯ ಬಳಿ ಮತ್ತು ಲಖ್ಮಿಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪವಾಸ್ ಗ್ರಾಮದಲ್ಲಿ ಬಿಸಾಡಿರುವುದು ಕಂಡುಬಂದಿವೆ" ಎಂದು ಸರ್ಕಲ್ ಅಧಿಕಾರಿ ವಿಕ್ರಾಂತ್ ತ್ರಿವೇದಿ ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್
ಸ್ಥಳೀಯರ ಪ್ರಕಾರ, ಲಖ್ಮಿಪುರ ಗ್ರಾಮದ ಘಟನೆಗೂ ಸುಮಾರು 12 ಗಂಟೆಗಳ ಮೊದಲು ಅದೇ ಪೊಲೀಸ್ ಠಾಣಾ ವ್ಯಾಪ್ತಿಯ ಪವಾಸ್ ಗ್ರಾಮದ ಜಮೀನೊಂದರ ಬಳಿ ಜಾನುವಾರಗಳ ಅವಶೇಷಗಳು ಪತ್ತೆಯಾಗಿದ್ದವು. ಅವು ಲಖ್ಮಿಪುರದ ಗೋಶಾಲೆಗೆ ಸೇರಿವೆ ಎಂದು ಶಂಕಿಸಲಾಗಿದೆ.
ಪವಾಸ್ ಗ್ರಾಮದ ಮುಖ್ಯಸ್ಥೆ ಪ್ರಿಯಾಂಕಾ ಕುಮಾರಿ ಅವರ ಪುತ್ರ ವಿಪಿನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಲಖ್ಮಿಪುರ ಗೋಶಾಲೆಯಲ್ಲಿ ಸೋಮವಾರದವರೆಗೆ 83 ಜಾನುವಾರುಗಳು ಇದ್ದವು. ಬುಧವಾರದ ವೇಳೆಗೆ ಅವು 56 ಕ್ಕೆ ಇಳಿದಿವೆ. ಬುಧವಾರ ರಾತ್ರಿ 12 ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಪಾವಾಸ್ ಗ್ರಾಮದಲ್ಲಿ 6 ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ. ಉಳಿದವುಗಳು ಇನ್ನೂ ಕಾಣೆಯಾಗಿವೆ" ಎಂದು ಹೇಳಿದರು.
"ಗೋಶಾಲೆಯಲ್ಲಿ ಸಿಬ್ಬಂದಿ ರಾತ್ರಿ ವೇಳೆ ತಂಗುವುದಿಲ್ಲ. ಗೇಟ್‌ಗೆ ಹೊರಗಿನಿಂದ ಬೀಗ ಹಾಕಲಾಗಿದೆ. ಅದನ್ನು ಮುರಿದ ಗುಂಪು ಗೋವುಗಳನ್ನು ಕದ್ದು ವಧೆ ಮಾಡಿದೆ. ಇದೊಂದು ಗಂಭೀರ ವಿಷಯ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಶ್ವಾಹ್ ತಿಳಿಸಿದರು.
ಘಟನೆ ತಿಳಿಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ದುಷ್ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸಿದರು. ವಿಶ್ವ ಗೋ ರಕ್ಷಾ ಸಂಘದ ರಾಜ್ಯಾಧ್ಯಕ್ಷ ನೇತ್ರಪಾಲ್ ಸಿಂಗ್ ಘಟನೆಗಳಿಗೆ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಗೋಶಾಲೆಯ ಮುಖ್ಯಸ್ಥರೇ ಹೊಣೆ ಎಂದು ಆರೋಪಿಸಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ