ಡೆಹ್ರಾಡೂನ್, ಉತ್ತರಾಖಂಡ್: ಹರಿದ್ವಾರ ಕುಂಭಮೇಳ ಸಂದರ್ಭದಲ್ಲಿ ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಉತ್ತರಾಖಂಡ್ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭವಾದ ಕುಂಭಮೇಳವನ್ನು ಏಪ್ರಿಲ್ 1ರಿಂದ 30ರವರೆಗೆ ಉತ್ತರಾಖಂಡ್ನಲ್ಲಿ ನಡೆಸಲಾಗಿತ್ತು. ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳ ಅನ್ವಯ ಹರಿದ್ವಾರ, ಡೆಹ್ರಾಡೂನ್ ಮತ್ತು ತೆಹ್ರಿ ಜಿಲ್ಲೆಗಳಲ್ಲಿ ಈ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಈ ಕುಂಭಮೇಳದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಭಾಗಿಯಾಗಿದ್ದು, ಇದೇ ವೇಳೆ ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿದ ಆರೋಪದ ಮೇಲೆ ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸ್, ಡಾ. ಲಾಲ್ ಚಂದಾನಿ ಲ್ಯಾಬ್ ಮತ್ತು ನಲ್ವಾ ಲ್ಯಾಬೊರೇಟರೀಸ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ದೇಶದ ಕೋವಿಡ್ ಸಕ್ರಿಯ ಕೇಸ್ಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ: ಚೇತರಿಕೆ ಪ್ರಮಾಣ ಶೇ. 96.16ಕ್ಕೆ ಏರಿಕೆ
ಪ್ರಕರಣ ದಾಖಲಾದ ಒಂದು ದಿನದ ನಂತರ ಹರಿದ್ವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೆಂಥಿಲ್ ಅವುದೈ ಕೃಷ್ಣ ರಾಜ್ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದರು. ತ್ವರಿತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸ್ ಮತ್ತು ಇತರ ಎರಡು ಲ್ಯಾಬ್‌ಗಳ ವಿರುದ್ಧ ಸಾಂಕ್ರಾಮಿಕ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ 120ಬಿ (ಶಿಕ್ಷಾರ್ಹ ಅಪರಾಧ ಸಂಚು) ಮತ್ತು ಭಾರತೀಯ ದಂಡ ಸಂಹಿತೆಯ 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.