ನವದೆಹಲಿ: ನಾಗರಿಕರು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದು ಅಥವಾ ವಿತರಿಸುವುದನ್ನು ಮಾಡಬೇಡಿ. ಯಾಕೆಂದರೆ ಸಂಸ್ಥೆಗಳು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಪ್ರದರ್ಶಿಸುವ ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ನಾಗರಿಕರು ಬಳಸುವುದು ಉತ್ತಮ. ಇದನ್ನು ಯುಐಡಿಎಐ ಅಧಿಕೃತ ವೆಬ್‌ಸೈಟ್ https://myaadhaar.uidai.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡೌನ್‌ಲೋಡ್ ಮಾಡುವ ಮೊದಲು "ಡು ಯು ವಾಂಟ್ ಅ ಮಾಸ್ಕ್ಡ್ ಆಧಾರ್" ಎಂಬ ಆಯ್ಕೆಯನ್ನು ಆಯ್ಕೆ ಮಾಡಲು UIDAI ಸೂಚಿಸಿದೆ. ಯಾವುದೇ ಆಧಾರ್ ಸಂಖ್ಯೆಯ ಅಸ್ತಿತ್ವವನ್ನು https://myaadhaar.uidai.gov.in/verifyAadhaar ನಲ್ಲಿ ಪರಿಶೀಲಿಸಲೂಬಹುದು ಎಂದು ತಿಳಿಸಿದೆ.
ಅದರ ಜೊತೆಗೆ, ಯಾವುದೇ ಆಧಾರ್ ಸಂಖ್ಯೆಯನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಲು, mAadhaar ಮೊಬೈಲ್ ಅಪ್ಲಿಕೇಶನ್‌ನಲ್ಲಿ QR ಕೋಡ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಇ-ಆಧಾರ್ ಅಥವಾ ಆಧಾರ್ ಪತ್ರ ಅಥವಾ ಆಧಾರ್ PVC ಕಾರ್ಡ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಬಹುದು.
ನಾಗರಿಕರು ತಮ್ಮ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್, ಇಂಟರ್ನೆಟ್ ಕೆಫೆ ಅಥವಾ ಕಿಯೋಸ್ಕ್ಗಳನ್ನು ಬಳಸುವುದನ್ನು ಆದಷ್ಟು ತಪ್ಪಿಸುವಂತೆಯೂ ಸರ್ಕಾರ ಸಲಹೆ ನೀಡಿದೆ. ಒಂದು ಅವುಗಳನ್ನು ಅವಲಂಬಿಸುವುದು ಅನಿವಾರ್ಯವೆನಿಸಿದರೂ ತಮ್ಮ ಕೆಲಸಗಳೆಲ್ಲ ಮುಗಿದ ಕೂಡಲೇ ತಾವು ಡೌನ್‌ಲೋಡ್ ಮಾಡಿಟ್ಟಿರುವ ಆಧಾರ್ನ ಇ ಪ್ರತಿಗಳನ್ನು ನೀವು ಬಳಸಿರುವ ಕಂಪ್ಯೂಟರ್ನಿಂದ ಶಾಶ್ವತವಾಗಿ ಅಳಿಸಿ ಹಾಕುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದೆ.
ಯುಐಡಿಎಐನಿಂದ ಬಳಕೆದಾರರ ಪರವಾನಗಿಯನ್ನು ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಬಹುದು. ಹೋಟೆಲ್‌ಗಳು ಅಥವಾ ಸಿನಿಮಾ ಹಾಲ್‌ಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್‌ನ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳಲು ಅನುಮತಿ ಇಲ್ಲ. ಇದು ಆಧಾರ್ ಕಾಯ್ದೆ 2016ರ ಅಡಿಯಲ್ಲಿ ಅಪರಾಧವಾಗಿದೆ. ಒಂದು ವೇಳೆ ಯಾವುದಾದರೂ ಖಾಸಗಿ ಘಟಕ ನಿಮ್ಮ ಆಧಾರ್ ಕಾರ್ಡ್ ಅನ್ನು ನೋಡಲು ಅಥವಾ ಫೋಟೊಕಾಪಿ ಕೇಳಿದರೆ, ಅವರು UIDAIನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ಹೇಳಿದೆ.
ಇದನ್ನೂ ಓದಿ: ಹಸು, ಮೇಕೆಗಳಿಗೂ ಆಧಾರ್ ಸಂಖ್ಯೆ ಕಡ್ಡಾಯ.. ಇದರಿಂದ ಏನು ಲಾಭ ಗೊತ್ತಾ?