ಮುಂಬೈ: ಸಚಿವ ಏಕನಾಥ್ ಶಿಂದೆ ಶಿವಸೇನೆಯ ಕೆಲ ಶಾಸಕರೊಂದಿಗೆ ಗುಜರಾತಿಗೆ ಹಾರಿ ಹೋಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ ಶಿವಸೇನೆಯ ಉನ್ನತ ನಾಯಕರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಮಹಾವಿಕಾಸ ಆಘಾಡಿ ಸರ್ಕಾರಕ್ಕೆ ಕಂಟಕ ಎದುರಾಗದಂತೆ ನೋಡಿಕೊಳ್ಳಲು ಸಿಎಂ ಉದ್ಧವ್ ತಕ್ಷಣ ಕಾರ್ಯೋನ್ಮುಖರಾಗಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಶಿವಸೇನಾ ನೇತೃತ್ವದ ಮಹಾವಿಕಾಸ ಆಘಾಡಿ (ಎಂವಿಎ- ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿಕೂಟ) 6 ಸ್ಥಾನಗಳಲ್ಲಿ ಸೋಲು ಅನುಭವಿಸಿದ ನಂತರ ಆಡಳಿತಾರೂಢ ಸರ್ಕಾರಕ್ಕೆ ಕೆಲಮಟ್ಟಿನ ಹಿನ್ನಡೆ ಆದಂತಾಗಿದೆ. ಇದರ ಮಧ್ಯೆ ಸಚಿವ ಶಿಂದೆ ಅವರೊಂದಿಗೆ ಕೆಲ ಶಾಸಕರು ಯಾವುದೇ ರೀತಿಯಲ್ಲೂ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಸಂಪರ್ಕಕ್ಕೆ ಸಿಗದ ಶಾಸಕರು ಗುಜರಾತಿನ ಸೂರತ್ನ ಹೊಟೇಲ್ ಒಂದರಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.
ಶಿವಸೇನೆ ಅಧ್ಯಕ್ಷರೂ ಆಗಿರುವ ಸಿಎಂ ಠಾಕ್ರೆ, ಮಂಗಳವಾರದಂದು ಶಾಸಕರಾದ ಸುನೀಲ ಕದಮ, ದಾದಾ ಭುಸೆ, ನೀಲಂ ಗೋಹರೆ, ಸಂಸದರಾದ ಅರವಿಂದ ಸಾವಂತ್ ಮತ್ತು ವಿನಾಯಕ ರಾವುತ್, ಎಂಎಲ್ಸಿ ಮನೀಷಾ ಕಾಯಂಡೆ ಸೇರಿದಂತೆ ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನಾ ಸಂಸದ ಸಂಜಯ ರಾವುತ್, "ಸಚಿವ ಏಕನಾಥ್ ಶಿಂದೆ ಮುಂಬೈನಲ್ಲಿ ಇಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ ಅವರೊಂದಿಗೆ ಸಂಪರ್ಕ ಏರ್ಪಟ್ಟಿದೆ ಎಂದು ತಿಳಿಸಿದರು. ಶಿವಸೇನೆ ನಿಷ್ಠಾವಂತರ ಪಕ್ಷವಾಗಿದೆ. ಸರ್ಕಾರ ಬೀಳಿಸುವ ಬಿಜೆಪಿಯ ಪ್ರಯತ್ನಗಳು ಸಫಲವಾಗಲಾರವು" ಎಂದು ಹೇಳಿದರು.