ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ) : ಪಾಕ್ ಆಕ್ರಮಿತ ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿರುವ ಭದ್ರತಾ ಪಡೆ ಪ್ರಮುಖ ಟೆರರ್ ಲಾಂಚ್ ಕಮಾಂಡರ್ ಬಶೀರ್ ಅಹ್ಮದ್ ಮಲ್ಲಿಕ್ನನ್ನು ಗುಂಡಿಟ್ಟು ಹತ್ಯೆ ಮಾಡಿವೆ ಎಂದು ಸೇನಾ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಲ್ಲಿಕ್ ಮತ್ತು ಮತ್ತೋರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಮಲ್ಲಿಕ್ ಬಶೀರ್ ಪಾಕ್ ಆಕ್ರಮಿತ ಪ್ರದೇಶ ಉತ್ತರದ ಲೀಪಾದಿಂದ ದಕ್ಷಿಣದ ರಜೌರಿಯವರೆಗೂ ಗಡಿಯಾಚೆಗಿನ ಭಯೋತ್ಪಾದನೆಯ ಪ್ರಮುಖ ಕಮಾಂಡರ್ ಆಗಿದ್ದ ಎಂದು ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ 30 ವರ್ಷಗಳಿಂದ ಸಕ್ರಿಯರಾಗಿದ್ದ ಮಲಿಕ್, ಹಲವು ಉಗ್ರರನ್ನು ಉರಿ ಸೆಕ್ಟರ್‌ನಲ್ಲಿ ಒಳನುಸುಳುವಲ್ಲಿ ಯಶಸ್ವಿಯಾಗಿದ್ದ. ಇದರಿಂದಾಗಿ ಅನೇಕ ಭಾರತೀಯ ನಾಗರಿಕರು, ಭದ್ರತಾ ಪಡೆಗಳ ಸಾವಿಗೂ ಕಾರಣನಾಗಿದ್ದ. ಆತನ ಹತ್ಯೆ ನಿಯಂತ್ರಣ ರೇಖೆಯಾದ್ಯಂತ ಉಗ್ರರಿಗೆ ಮೂಲಸೌಕರ್ಯ ಒದಗಿಸುತ್ತಿದ್ದವರಿಗೆ ದೊಡ್ಡ ಹೊಡೆತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಮತ್ತೆ ಮತ್ತೆ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ನಡೆಯುತ್ತಿರುವುದು ಅಲ್ಲಿನ ಜನರ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡಿದೆ. ಇದು ಕಾಶ್ಮೀರ ಕಣಿವೆಗೆ ಇನ್ನಷ್ಟು ಭಯೋತ್ಪಾದಕರನ್ನು ನುಸುಳಲು ಶತ್ರುಗಳು ನಡೆಸುತ್ತಿರುವ ಹತಾಶೆಯ ಪ್ರದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ನಡೆದ ಎರಡನೇ ಒಳನುಸುಳುವಿಕೆ ಪ್ರಯತ್ನ ಇದಾಗಿದೆ. ಮೊದಲ ಪ್ರಯತ್ನವನ್ನೂ ಕೂಡ ಸೇನಾ ಪಡೆ ವಿಫಲಗೊಳಿಸಿತ್ತು. ಈಗಾಗಲೇ ಈ ಸ್ಥಳದಲ್ಲಿ ಉಗ್ರರ ವಿರುದ್ದ ಹೊಂಚುದಾಳಿ ನಡೆಸಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಹವಾಮಾನವು ಪ್ರತಿಕೂಲವಾಗಿತ್ತು. ಸೇನಾಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿವೆ. ಈಗಾಗಲೇ ಅವರ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿ ಹೆಚ್ಚು ಭಯೋತ್ಪಾದಕರ ಸಾವು - ನೋವುಗಳಾಗಿರಬಹುದು. ಆದರೆ ನಾವು ನಿಯಂತ್ರಣ ರೇಖೆಯನ್ನು ದಾಟಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ಎ ಕೆ ಸಿರೀಸ್ ರೈಫಲ್‌ಗಳು, ಎರಡು ಪಿಸ್ತೂಲ್‌ಗಳು, ನಾಲ್ಕು ಚೈನೀಸ್ ಹ್ಯಾಂಡ್ ಗ್ರೆನೇಡ್‌ಗಳು, ಮದ್ದುಗುಂಡುಗಳ ಜೊತೆಗೆ ಔಷಧಗಳು, ಪಾಕಿಸ್ತಾನದ 2630 ರೂ ಕರೆನ್ಸಿ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿಯನ್ನು ಒಳಗೊಂಡ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಮತ್ತೊಬ್ಬ ಉಗ್ರ ಖತಂ: ಗಡಿ ನುಸುಳುವ ಯತ್ನ ವಿಫಲಗೊಳಿಸಿದ ಭದ್ರತಾ ಪಡೆಗಳು