ಬಂಡಿಪೋರಾ(ಜಮ್ಮು-ಕಾಶ್ಮೀರ): ಪೊಲೀಸರನ್ನ ಗುರಿಯಾಗಿಸಿಕೊಂಡು ಉಗ್ರರು ನಡೆಸಿರುವ ಗುಂಡಿನ ದಾಳಿಯಲ್ಲಿ ಇಬ್ಬರು ಹುತಾತ್ಮರಾಗಿದ್ದಾರೆ. ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುಲ್ಶನ್ ಚೌಕ್ನಲ್ಲಿ ಈ ಘಟನೆ ನಡೆದಿದೆ.
ಇಂದು ಸಂಜೆ ಬಂಡಿಪೋರಾದ ಗುಲ್ಶನ್ ಚೌಕ್ನಲ್ಲಿ ಪೊಲೀಸರ ಗುಂಪಿನ ಮೇಲೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಉತ್ತರ ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಗುಂಡಿನ ದಾಳಿ ವೇಳೆ ಮೊಹಮ್ಮದ್ ಸುಲ್ತಾನ್ ಹಾಗೂ ಫೈಯಾಜ್ ಅಹ್ಮದ್ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿರಿ: ಅನುಮಾನದ ಭೂತ: ಮದುವೆಯಾದ 6 ತಿಂಗಳಲ್ಲೇ ಪತ್ನಿ ಮೇಲೆ ಶಂಕೆ ಪಟ್ಟು ಕೊಲೆಗೈದ ಪಾಪಿ!
ದಾಳಿ ನಡೆಯುತ್ತಿದ್ದಂತೆ ಗುಲ್ಶನ್ ಚೌಕ್ನಲ್ಲಿ ಪೊಲೀಸರು ಹಾಗೂ ಸೇನೆ ಸುತ್ತುವರೆದಿದೆ. ಶೋಧ ಕಾರ್ಯಾಚರಣೆ ನಡೆಸಿದ್ದಾರೆಂದು ವರದಿಯಾಗಿದೆ.