ಮುಂಬೈ: ಕುಡಿದು ವಿಮಾನ ಸಂಚಾರದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಗಳು ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದವು. ಇದಾದ ಬಳಿಕ ವಿಮಾನ ಪ್ರಯಾಣದ ವೇಳೆ ಮದ್ಯಪಾನ ನಿಷೇಧ ಮಾಡಲಾಗಿದೆ. ಇದರ ಹೊರತಾಗಿಯೂ ಅಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಇಂಡಿಗೋ ವಿಮಾನದಲ್ಲಿ ಕುಡಿದಿದ್ದ ಇಬ್ಬರು ಪ್ರಯಾಣಿಕರು ಗಲಾಟೆ ನಡೆಸಿ, ಅಶಿಸ್ತು ತೋರಿದ ಘಟನೆ ನಡೆದಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಮದ್ಯದ ಮತ್ತಿನಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ್ದಲ್ಲದೇ, ಅಶಿಸ್ತಿನಿಂದ ವರ್ತಿಸಿದ್ದಾರೆ. ಅಮಲೇರಿಸಿಕೊಂಡು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ. ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಬುಧವಾರ ದುಬೈನಿಂದ ವಿಮಾನವು ಮುಂಬೈಗೆ ಬಂದಿಳಿಯಿತು. ನಂತರ ಆ ಇಬ್ಬರು ಅಶಿಸ್ತಿನ ಪ್ರಯಾಣಿಕರನ್ನು ಬಂಧಿಸಲಾಯಿತು. ಬಳಿಕ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಜಾಮೀನು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ವಿಮಾನದಲ್ಲಿ ವಾಗ್ವಾದ: ಇಬ್ಬರು ಆರೋಪಿಗಳು ಪಾಲ್ಘರ್ ಮತ್ತು ಕೊಲ್ಹಾಪುರದ ನಲಸೋಪಾರದವರು ಎಂದು ಗುರುತಿಸಲಾಗಿದೆ. ದುಬೈನಲ್ಲಿ 1 ವರ್ಷದಿಂದ ಯಾವುದೋ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು. ತವರಿಗೆ ಹಿಂದಿರುಗುತ್ತಿದ್ದ ವೇಳೆ ಅವರು ಮದ್ಯ ಸೇವನೆ ಮಾಡಿದ್ದರು. ವಿಮಾನದಲ್ಲಿ ಸಹ ಪ್ರಯಾಣಿಕರ ಜೊತೆಗೆ ತಗಾದೆ ತೆಗೆದಿದ್ದಾರೆ. ಈ ವೇಳೆ ವಾಗ್ವಾದ ಶುರುವಾಗಿದೆ. ಮಧ್ಯಪ್ರವೇಶಿಸಿದ ವಿಮಾನ ಸಿಬ್ಬಂದಿಯನ್ನೂ ಅವರು ನಿಂದಿಸಿದ್ದಾರೆ.
ಇಬ್ಬರು ವಿಮಾನದಲ್ಲೂ ಮದ್ಯಸೇವನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ವಿಮಾನ ಸಿಬ್ಬಂದಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವಿಮಾನ ಮುಂಬೈಗೆ ಬಂದಿಳಿದ ಬಳಿಕ ಅವರನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಮತ್ತು ವಿಮಾನ ನಿಯಮಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣಾಧಿಕಾರಿ ತಿಳಿಸಿದರು.
ವಿಮಾನಗಳಲ್ಲಿ ಈ ವರ್ಷದಲ್ಲಿ ನಡೆದ ಏಳನೇ ಘಟನೆ ಇದಾಗಿದೆ. ಅಶಿಸ್ತಿನ ವರ್ತನೆ, ಮದ್ಯ ಸೇವನೆ, ಶೌಚಾಲಯದಲ್ಲಿ ಧೂಮಪಾನ, ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆಯಂತಹ ಘಟನೆಗಳು ನಡೆದಿದ್ದವು. ಈಚೆಗೆ ವ್ಯಕ್ತಿಯೊಬ್ಬ ಲಂಡನ್- ಮುಂಬೈ ವಿಮಾನದ ತುರ್ತು ಬಾಗಿಲನ್ನು ಪ್ರಯಾಣದ ವೇಳೆಯೇ ತೆರೆಯಲು ಪ್ರಯತ್ನಿಸಿದ್ದು, ಆತನನ್ನು ಬಂಧಿಸಲಾಗಿದೆ.
ಇಂಡಿಗೋದಲ್ಲಿ ಧೂಮಪಾನ ಕೇಸ್: ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಸ್ಸೋಂನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಬಂದಿದ್ದ ವ್ಯಕ್ತಿ ನಿಷೇಧದ ಮಧ್ಯೆ ಶೌಚಾಲಯದಲ್ಲಿ ಸಿಗರೇಟ್ ಸೇವನೆ ಮಾಡಿದ್ದ. ಇದು ಆತಂಕಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಇಂಡಿಗೋ ವಿಮಾನ ಶೌಚಾಲಯದಲ್ಲಿ ಧೂಮಪಾನ: ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು