ವಿಜಯನಗರಂ(ಆಂಧ್ರಪ್ರದೇಶ): ತಾನು ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಕಾಮುಕನೊಬ್ಬ ಇಬ್ಬರು ಬುಡಕಟ್ಟು ಜನಾಂಗದ ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದಿದೆ. 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿವರ:
ಹೊಸ ವರ್ಷದ ದಿನವೇ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತೆಯರು ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿ ಮನೆಗೆ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿ ದುಷ್ಕೃತ್ಯವೆಸಗಿದ್ದಾನೆ. ಬಾಲಕಿಯರು ನೀಡಿರುವ ದೂರಿನನ್ವಯ ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಬ್ಬರು ಬಾಲಕಿಯರು ತಮ್ಮ ಸ್ನೇಹಿತರೊಂದಿಗೆ ಪಿಕ್ನಿಕ್ಗಾಗಿ ವಟ್ಟಿಗೆದ್ದ ಜಲಾಶಯಕ್ಕೆ ತೆರಳಿ, ಅಲ್ಲಿಂದ ಹಾಸ್ಟೆಲ್ಗೆ ಹಿಂತಿರುಗುತ್ತಿದ್ದರು. ಈ ವೇಳೆ ಆರೋಪಿ ರಾಮ್ಬಾಬು, ತಾನು ಪೊಲೀಸ್ ಅಧಿಕಾರಿಯೆಂದು ನಂಬಿಸಿ ಬೇರೆಡೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಇದನ್ನೂ ಓದಿ: ತಾಯಿ ಮೃತದೇಹ ಹೊತ್ತು 4 ಕಿಮೀ ನಡೆದೇ ಸಾಗಿ ಅಂತ್ಯಕ್ರಿಯೆ ನಡೆಸಿದ ಹೆಣ್ಣುಮಕ್ಕಳು
ತನ್ನ ವಿರುದ್ಧ ಪ್ರಕರಣ ದಾಖಲಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನಂತೆ. ಈ ಬಗ್ಗೆ ಬಾಲಕಿಯರು ತಮ್ಮ ಪೋಷಕರ ಮುಂದೆ ಹೇಳಿಕೊಂಡಿದ್ದು, ಈ ಬೆನ್ನಲ್ಲೇ ಆತನ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಬಾಲಕಿಯರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ. ದೀಪಿಕಾ ತಿಳಿಸಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್ 376, 506 ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.