ಕಾನ್ಪುರ(ಉತ್ತರ ಪ್ರದೇಶ): ಕಿದ್ವಾಯಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ ಕಾಲೋನಿಯಲ್ಲಿ ಗುರುವಾರ ರಾತ್ರಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ಬೇರೆ ಸಮುದಾಯದ ಹುಡುಗಿಯೊಂದಿಗೆ ಯುವಕನೊಬ್ಬ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಿಕ ಎರಡು ಸಮುದಾಯಗಳ ನಡುವೆ ವಾಗ್ವಾದ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸ್ಥಳದಲ್ಲಿದ್ದ ಪೊಲೀಸರು, ಜನರು ಮನೆಯಿಂದ ಹೊರಗೆ ಬರದಂತೆ ತಡೆದಿದ್ದಾರೆ. ಎರಡು ದಿನಗಳ ಹಿಂದೆ ಮಹಾನಗರದ ಕಿದ್ವಾಯಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಕುಟುಂಬಸ್ಥರು ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಗುರುವಾರ ರಾತ್ರಿಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಾಲಕಿಯ ಮನೆಯವರು ಪೊಲೀಸ್ ಠಾಣೆಗೆ ತೆರಳಿ ಗಲಾಟೆ ಆರಂಭಿಸಿದ್ದಾರೆ. ಪೊಲೀಸರು ಸೂಕ್ತ ಕ್ರಮದ ಭರವಸೆ ನೀಡಿದ ನಂತರ ಅವೆರಲ್ಲ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಪೊಲೀಸ್ ಠಾಣೆಯಿಂದ ಹಿಂತಿರುಗಿದ ನಂತರ ಬಾಲಕಿ ಮನೆಯವರು ಯುವಕನ ಮನೆಗೆ ಹೋಗಿ ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿದ್ವಾಯಿ ನಗರ ಪೊಲೀಸರು ವಾತಾವರಣವನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಿ ಬಜರಂಗದಳ ಕಾರ್ಯಕರ್ತರು ಅಲ್ಲಿಗೆ ತಲುಪಿದರು. ಈ ವೇಳೆ ಎರಡೂ ಸಮುದಾಯದವರ ನಡುವೆ ಕಲ್ಲು ತೂರಾಟವೂ ನಡೆದಿದೆ ಎನ್ನಲಾಗ್ತಿದೆ. ಸದ್ಯ ಆರ್‌ಆರ್‌ಎಫ್ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
ಇದನ್ನೂ ಓದಿ: ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ: ಮತ್ತೋರ್ವ ಆರೋಪಿ ವಶಕ್ಕೆ ಪಡೆದ ಪೊಲೀಸರು!