ನವದೆಹಲಿ: ಇಂದು ಬೆಳಗ್ಗೆಯಷ್ಟೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ, ಮತ್ತೆ ಸೇರ್ಪಡೆಗೊಳಿಸಿದ್ದ ಟ್ವಿಟರ್ ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಖಾತೆ ಮೇಲೆ ತನ್ನ ದೃಷ್ಟಿ ಬೀರಿದೆ.
ಮೋಹನ್ ಭಾಗವತ್ ಅವರ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಬ್ಯಾಡ್ಜ್ಅನ್ನು ತೆಗೆದುಹಾಕಿದೆ. ಆರ್ಎಸ್ಎಸ್ ಮುಖ್ಯಸ್ಥನಿಗೆ ಟ್ವಿಟರ್ನಲ್ಲಿ ಸುಮಾರು 2 ಲಕ್ಷ ಅನುಯಾಯಿಗಳಿದ್ದಾರೆ. ಮೋಹನ್ ಭಾಗವತ್ ಅವರ ಟ್ವಿಟರ್ ಖಾತೆಯನ್ನು 2019ರಲ್ಲಿ ತೆರೆಯಲಾಗಿದ್ದು, ಆ ಬಳಿಕ ಯಾವುದೇ ಟ್ವೀಟ್ಗಳನ್ನು ಅವರು ಮಾಡಿರಲಿಲ್ಲ.
ಟ್ವಿಟ್ಟರ್ ಪರಿಶೀಲನಾ ನೀತಿಯ ಪ್ರಕಾರ, ಅಧಿಕೃತ ಖಾತೆಯನ್ನು ಗುರುತಿಸಲು ಬ್ಲೂ ಬ್ಯಾಡ್ಜ್/ ಮಾರ್ಕ್ ನೀಡಲಾಗುತ್ತದೆ. ನೀಲಿ ಬ್ಯಾಡ್ಜ್ ಸ್ವೀಕರಿಸಬೇಕಾದರೆ ನಿಮ್ಮ ಖಾತೆಯು ಸಕ್ರಿಯವಾಗಿರಬೇಕು. ಬಳಕೆದಾರರ ನಡುವೆ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇದು ಸಹಕರಿಸುತ್ತದೆ. ಒಂದು ವೇಳೆ ನಿಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ ನೀಲಿ ಬ್ಯಾಡ್ಜ್ಅನ್ನು ಟ್ವಿಟರ್ ತೆಗೆದು ಹಾಕುತ್ತದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್
ಕೆಲ ಹೊತ್ತಿನ ಹಿಂದಷ್ಟೇ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್ ಮತ್ತೆ ಸೇರ್ಪಡೆಗೊಳಿಸಿತ್ತು. ಜುಲೈ 2020ರಿಂದ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆ ಆ್ಯಕ್ಟೀವ್ ಇರದ ಕಾರಣ ಹೀಗೆ ಮಾಡಲಾಗಿತ್ತು ಎಂದು ಟ್ವಿಟರ್ ಸ್ಪಷ್ಟನೆಯನ್ನೂ ನೀಡಿದೆ.