ಸೊಲ್ಲಾಪುರ (ಮಹಾರಾಷ್ಟ್ರ): ಅಯ್ಯೋ ದೇವರೇ ಯಾಕಾದರೂ ಪುರುಷರಾಗಿ ಜನಿಸಿದೆವೋ.. ಮದುವೆ ವಯಸ್ಸು ಮೀರುತ್ತಿದೆ.. ಕನ್ಯೆ ಸಿಗುತ್ತಿಲ್ಲ ಎಂದು ಯುವಕರು ಗೋಳಿಡುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ.. ಇತ್ತೀಚೆಗೆ ಮಂಡ್ಯದಲ್ಲಿ ಕನ್ಯೆಯರಿಗಾಗಿ ಸಾವಿರಾರು ಯುವಕರು ಕ್ಯೂ ನಿಂತಿದ್ದು ಗೊತ್ತೇ ಇದೆ. ಆದ್ರೆ ಮಹಾರಾಷ್ಟ್ರದಲ್ಲಿ ಯುವಕನೋರ್ವ ಇಬ್ಬರನ್ನು ಒಂದೇ ಬಾರಿಗೆ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಸೊಲ್ಲಾಪುರದಲ್ಲಿ ಒಬ್ಬನೇ ಯುವಕನನ್ನು ಅವಳಿ ಸಹೋದರಿಯರು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮತ್ತೊಂದು ಅಚ್ಚರಿ ಎಂದರೆ ಇಬ್ಬರು ಸಹೋದರಿಯರು ಕೂಡ ಸಾಫ್ಟ್ವೇರ್ ಉದ್ಯೋಗಿಗಳು ಆಗಿದ್ದು, ಯುವಕ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಈ ಅಪರೂಪದ ಮದುವೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸೊಲ್ಲಾಪುರ ಜಿಲ್ಲೆಯ ಅಕ್ಲುಜ್ನ ಗಲಾಂಡೆ ಹೋಟೆಲ್‌ನಲ್ಲಿ ಶುಕ್ರವಾರ ಈ ವಿಶಿಷ್ಟ ವಿವಾಹ ಸಮಾರಂಭ ನಡೆದಿದೆ. ಸಾಫ್ಟ್ವೇರ್ ಉದ್ಯೋಗಿಗಳಾದ 36 ವರ್ಷದ ಪಿಂಕಿ ಮತ್ತು ರಿಂಕಿ ಸಹೋದರಿಯರು ಅತುಲ್ ಎಂಬ ಯುವಕನನ್ನು ವರಿಸಿದ್ದಾರೆ. ಈ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಚರ್ಚೆಯನ್ನೂ ಸಹ ಹುಟ್ಟು ಹಾಕಿದೆ.
ಅನಾರೋಗ್ಯದ ಸಮಯದಲ್ಲಿ ನೆರವಾಗಿದ್ದ ಅತುಲ್: ಕೆಲ ವರ್ಷಗಳ ಹಿಂದೆ ಪಿಂಕಿ ಮತ್ತು ರಿಂಕಿ ಅವರ ತಂದೆ ತೀರಿಕೊಂಡಿದ್ದಾರೆ. ಅಂದಿನಿಂದ ತಾಯಿಯೊಂದಿಗೆ ಇಬ್ಬರು ವಾಸಿಸುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಪಿಂಕಿ ಮತ್ತು ರಿಂಕಿ ಹಾಗೂ ತಾಯಿ ಮೂವರು ಅನಾರೋಗ್ಯಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: ಮದುವೆ ಮನೆಯಿಂದ ನೇರ ಮತಗಟ್ಟೆಗೆ.. ಮತದಾನ ಮಾಡಿ ಗಮನ ಸೆಳೆದ ನವದಂಪತಿ
ಇದರಿಂದ ಪಿಂಕಿ ಮತ್ತು ರಿಂಕಿ, ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಅತುಲ್ ಈ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಈ ಮೂವರನ್ನು ಅತುಲ್ ನೋಡಿಕೊಳ್ಳುತ್ತಿದ್ದರು. ಇಲ್ಲಿಯೇ ಪ್ರೇಮ ಸಂಬಂಧ ಸಹ ಬೆಳೆದಿದ್ದು, ನಂತರ ಸಂಬಂಧಿಕರ ಒಪ್ಪಿಗೆ ಮೇರೆಗೆ ಅವಳಿ ಸಹೋದರಿಯರು ಅತುಲ್ರನ್ನು ಮದುವೆ ಆಗಲು ನಿರ್ಧರಿಸಿದ್ದರು.
ಮುಂಬೈನ ಐಟಿ ಕಂಪನಿಯಲ್ಲಿ ಕೆಲಸ: ಮುಂಬೈನ ಐಟಿ ಕಂಪನಿಯಲ್ಲಿ ರಿಂಕಿ ಮತ್ತು ಪಿಂಕಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ವಿದ್ಯಾಭ್ಯಾಸವೂ ಒಂದುಗೂಡಿ ಮಾಡಿದ್ದು, ಒಂದೇ ಐಟಿ ಕಂಪನಿಯಲ್ಲಿ ಕೆಲಸ ಸಹ ಮಾಡುತ್ತಿದ್ದಾರೆ. ಜೊತೆಗೆ ಈ ಇಬ್ಬರು ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಇಬ್ಬರೂ ಒಬ್ಬರಿಗೊಬ್ಬರು ಎಷ್ಟು ಒಗ್ಗಿಕೊಂಡಿದ್ದಾರೆ ಎಂದರೆ ಒಬ್ಬನೇ ವರನನ್ನು ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡು ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ: ವರ ತೊದಲುವುದು ಕಂಡು ಮದುವೆ ನಿಲ್ಲಿಸಿದ ವಧು..! ಆ ಮೇಲೆ ನಡೆದಿದ್ದೇನು ಗೊತ್ತೇ?
ಪೊಲೀಸರಿಂದ ಕೇಸ್ ದಾಖಲು: ಇಬ್ಬರು ವಧುಗಳು, ಒಬ್ಬ ವರನನ್ನು ಮದುವೆಯಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಇದು ಪೊಲೀಸರ ಗಮನಕ್ಕೂ ಬಂದಿದೆ. ಈ ಬಗ್ಗೆ ವರನ ವಿರುದ್ಧ ಪೊಲೀಸರು ಕೇಸ್ ಕೂಡ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು)ಅಡಿಯಲ್ಲಿ ಅರಿವಿಗೆ ಬಾರದ (ನಾನ್ ಕಾಗ್ನೈಸಬಲ್ -ಎನ್‌ಸಿ) ಪ್ರಮಾದದಡಿ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಕೇಸ್ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅನಾಥ ಯುವತಿಯರಿಗೆ ಅದ್ಧೂರಿ ಮದುವೆ ಮಾಡಿಸಿದ ನೆರೆಹೊರೆಯರು: ಅತ್ತೆ ಮನೆಗೆ ಖುಷಿಯಿಂದ ನವವಧುಗಳ ಹೆಜ್ಜೆ