ಮುಂಬೈ (ಮಹಾರಾಷ್ಟ್ರ) : ಕ್ವಿಟ್ ಇಂಡಿಯಾ ಚಳವಳಿಯ 81ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿ ನಡೆಸದಂತೆ ನನ್ನನ್ನು ಪೊಲೀಸರು ತಡೆದಿದ್ದಾರೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಷಾರ್ ಗಾಂಧಿ ಅವರು ಇಂದು ಬೆಳಿಗ್ಗೆ ಸುಬುರ್ಬಾನ್ ಸಾಂತಾ ಕ್ರೂಝ್ನಲ್ಲಿರುವ ಮನೆಯಿಂದ ಹೊರಟಿದ್ದರು. ಈ ವೇಳೆ ಮನೆಗೆ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಹೋಗದಂತೆ ತಡೆದಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತುಷಾರ್ ಗಾಂಧಿ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ನಾನು ಕ್ವಿಟ್ ಇಂಡಿಯಾ ದಿನದ ಕಾರ್ಯಕ್ರಮಕ್ಕೆ ಮನೆಯಿಂದ ಹೊರಟಾಗ ಸಾಂತಾ ಕ್ರೂಜ್ ಠಾಣೆಯ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಈ ಹಿಂದೆ ಐತಿಹಾಸಿಕ ದಿನದಂದು ನನ್ನ ಮುತ್ತಾತ ಬಾಪು ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮನೆಯಿಂದ ಹೊರಟ ತಮ್ಮನ್ನು ಆಗಸ್ಟ್ ಕ್ರಾಂತಿ ಮೈದಾನಕ್ಕೆ ತೆರಳದಂತೆ ಪೊಲೀಸರು ತಡೆದಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ಜಿ ಜಿ ಪರೀಖ್ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ಹೇಳಿದ್ದಾರೆ. ತುಷಾರ್ ಗಾಂಧಿ, ತೀಸ್ತಾ ಸೆಟಲ್ವಾಡ್ ಮತ್ತು ಪರೀಖ್ ಅವರು ಕ್ವಿಟ್ ಇಂಡಿಯಾ ಚಳವಳಿ ನೆನಪಿನ ಸಂಬಂಧ ಇಲ್ಲಿನ ಗಿರ್ಗಾಂವ್ ಚೌಪಟ್ಟಿಯಿಂದ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹಮ್ಮಿಕೊಂಡಿದ್ದ ಶಾಂತಿ ರ‍್ಯಾಲಿಯಲ್ಲಿ ಭಾಗವಹಿಸಬೇಕಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹಮ್ಮಿಕೊಂಡಿದ್ದ ರ‍್ಯಾಲಿಗೆ ಅವಕಾಶ ನಿರಾಕರಿಸಿರುವುದರಿಂದ ತುಷಾರ್ ಗಾಂಧಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹೇಳಲಾಗಿದೆ. ಬಳಿಕ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೆಟಲ್ವಾಡ್ ಅವರು ಆಗಸ್ಟ್ ಕ್ರಾಂತಿ ಮೈದಾನಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಪರೀಖ್ ಅವರು ಗಿರ್ ಗಾಂವ್ ನಲ್ಲಿರುವ ಲೋಕಮಾನ್ಯ ತಿಲಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ನಿರ್ಗಮಿಸಿದರು.
ಇದಕ್ಕೂ ಮುನ್ನ, ದಕ್ಷಿಣ ಮುಂಬೈನ ಡಿಬಿ ಮಾರ್ಗ್ ಪೊಲೀಸರು ಗಿರ್ಗಾಂವ್ ಚೌಪಟ್ಟಿ ಬಳಿ ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ಕ್ವಿಟ್ ಇಂಡಿಯಾ ಚಳವಳಿಯ 81ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಜನರು ಆಗಸ್ಟ್ ಕ್ರಾಂತಿ ಮೈದಾನಕ್ಕೆ ಭೇಟಿ ನೀಡಿ ಗಾಂಧಿ ಸ್ಮೃತಿ ಸ್ತಂಭದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ : 'ಸ್ತ್ರೀ ದ್ವೇಷಿ ವ್ಯಕ್ತಿ': ಸಂಸತ್ತಿನಲ್ಲಿ ರಾಹುಲ್ 'ಫ್ಲೈಯಿಂಗ್ ಕಿಸ್'ಗೆ ಸ್ಮೃತಿ ಇರಾನಿ ಆಕ್ಷೇಪ; ಸ್ಪೀಕರ್‌ಗೆ ಶೋಭಾ ಕರಂದ್ಲಾಜೆ ದೂರು