ಅಂಬಾಸಾ (ತ್ರಿಪುರಾ): ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಸನಿಹ ಬರುತ್ತಿದ್ದಂತೆ ಪ್ರಚಾರದ ಕಾವು ಹೆಚ್ಚಾಗಿದೆ. ತ್ರಿಪುರಾದಲ್ಲಿ ಇದೇ 16ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಪ್ರಚಾರದಲ್ಲಿ ಭಾಗಿಯಾದರು. ರಾಜ್ಯದಲ್ಲಿ ಮೊದಲ ಬಾರಿಗೆ 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆಗೆ ಮೋದಿ ಸಾರಿ ಸಾರಿ ಹೇಳಿದರು.
ಈ ಹಿಂದಿನ ಸರ್ಕಾರಗಳ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಟೀಕಿಸಿದ ಪ್ರಧಾನಿ, ಕಳೆದ ಐದು ವರ್ಷದಲ್ಲಿ ಈಶಾನ್ಯ ರಾಜ್ಯ ತ್ರಿಪುರಾದಲ್ಲಾದ ಬದಲಾವಣೆ ಮತ್ತು ಅಭಿವೃದ್ಧಿ ಪಥದ ಬಗ್ಗೆ ಹಾಗೂ ಬೆಳವಣಿಗೆಯ ಕುರಿತಾಗಿ ಮಾತನಾಡಿದರು. ದಕ್ಷಿಣ ಏಷ್ಯಾದ ಹೆಬ್ಬಾಗಿಲು ಎಂದು ತ್ರಿಪುರಾವನ್ನು ಕರೆದ ಮೋದಿ, ಸಾಧನೆ ಮತ್ತು ಅಭಿವೃದ್ಧಿಯ ಜಪ ಮಾಡಿದರು.
ಚುನಾವಣೆ ಸನಿಹ ಇರುವ ಸಂದರ್ಭದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ತ್ರಿಪುರಾಗೆ ಪ್ರಚಾಕ್ಕೆ ತೆರಳಿದರು. ಪ್ರಚಾರಕ್ಕೂ ಮುನ್ನ ತ್ರಿಪುರಾದ ಅಂಬಾಸಾದಲ್ಲಿ ಪ್ರಧಾನಿ ಮೊದಲ ಸಾರ್ವಜನಿಕ ಸಭೆ ನಡೆಸಿದರು. ಆ ಸಭೆಯಿಂದ ಅವರು ಎಡ ಮತ್ತು ಕಾಂಗ್ರೆಸ್ನ್ನು ಗುರಿಯಾಗಿಸಿದರು. ಆಗ ತ್ರಿಪುರಾದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು. "ಕಾಂಗ್ರೆಸ್ ಮತ್ತು ಎಡರಂಗದ ಆಡಳಿತದಲ್ಲಿ ತ್ರಿಪುರಾ ಹಿಂದುಳಿದಿತ್ತು, ಆದರೆ ನಮ್ಮ ಸರ್ಕಾರವು ಕೇವಲ ಐದು ವರ್ಷಗಳಲ್ಲಿ ತ್ರಿಪುರಾ ತ್ವರಿತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ" ಎಂದು ಅಲ್ಲಿನ ಸರ್ಕಾರದ ಬೆನ್ನು ತಟ್ಟಿದರು.
ತ್ರಿಪುರಾ ಅಭಿವೃದ್ಧಿಯ ಪಥಕ್ಕೆ: "ತ್ರಿಪುರಾದಲ್ಲಿ ಡಬಲ್ ಇಂಜಿನ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ತ್ರಿಪುರಾದ ಜನರು ಡಬಲ್ ಇಂಜಿನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಬಿಜೆಪಿ ಆಡಳಿತದಲ್ಲಿ ತ್ರಿಪುರಾ ಅಭಿವೃದ್ಧಿಯ ಪಥಕ್ಕೆ ಮರಳಿದೆ. ಹಿಂಸಾಚಾರ, ಹಿಂದುಳಿದಿರುವಿಕೆ ತ್ರಿಪುರಾದ ಗುರುತಲ್ಲ, ಈ ಹಿಂದೆ ತ್ರಿಪುರಾದಲ್ಲಿ ಒಂದೇ ತಂಡಕ್ಕೆ ಧ್ವಜಾರೋಹಣ ಮಾಡಲು ಅವಕಾಶವಿತ್ತು. ಆದರೆ ಇಂದು ಬಿಜೆಪಿ ಸರ್ಕಾರ ತ್ರಿಪುರಾವನ್ನು ಭಯ, ಬೆದರಿಕೆ ಮತ್ತು ಹಿಂಸೆಯಿಂದ ಮುಕ್ತಗೊಳಿಸಿದೆ" ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
"ತ್ರಿಪುರಾದಲ್ಲಿ ಹೆದ್ದಾರಿಗಳು, ಇಂಟರ್ನೆಟ್ ಸಂಪರ್ಕ, ರೈಲ್ವೆ ಮತ್ತು ವಾಯುಮಾರ್ಗಗಳ ಭರವಸೆ ನೀಡಲಾಗಿತ್ತು ಅವುಗಳನ್ನು ಸಾಧಿಸಲಾಗಿದೆ. ತ್ರಿಪುರಾದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ತ್ರಿಪುರಾದಲ್ಲಿ ಹಳ್ಳಿಗಳನ್ನು ಸಂಪರ್ಕಿಸಲು ಸುಮಾರು 5,000 ಕಿಮೀ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ" ಎಂದು ತಮ್ಮ ಭಾಷಣದಲ್ಲಿ ಮೋದಿ ಉಲ್ಲೇಖಿಸಿದರು.
ಮತ್ತೆ ಅಧಿಕಾರಕ್ಕೆ ಪಣ: 1993 ರಿಂದ 2018 ರವರೆಗೆ ಸತತ 25 ವರ್ಷಗಳ ಕಾಲ ಎಡರಂಗವು ತ್ರಿಪುರಾದಲ್ಲಿ ಆಡಳಿತ ಮಾಡಿತ್ತು. 2018ರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಪಡೆಯಿತು. ಫೆಬ್ರವರಿ 16 ರಂದು ತ್ರಿಪುರಾದಲ್ಲಿ 60 ಸ್ಥಾನಗಳಿಗೆ ಚುನಾವಣೆ ಮತ್ತು ಮಾರ್ಚ್ 2 ರಂದು ಮತ ಎಣಿಕೆ ಆಗಲಿದೆ. ಭಾರತೀಯ ಜನತಾ ಪಕ್ಷವು 55 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಐದು ಸ್ಥಾನಗಳಲ್ಲಿ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎಡ-ಕಾಂಗ್ರೆಸ್ ಮೈತ್ರಿಕೂಟ ಕೂಡ ಎಲ್ಲಾ 60 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದನ್ನೂ ಓದಿ: ರಾಷ್ಟ್ರ ವಿರೋಧಿಗಳಿಗೆ ಬೆಂಬಲಿಸುವ ಕಾಂಗ್ರೆಸ್ನಿಂದ ಕರ್ನಾಟಕ ರಕ್ಷಣೆ ಅಸಾಧ್ಯ: ಅಮಿತ್ ಶಾ