ಅಗರ್ತಲಾ(ತ್ರಿಪುರಾ): ಶಾಲೆಗಳು ನಡೆಯುವ ಅವಧಿಯಲ್ಲಿ ಶಾಲಾ ಆವರಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ನಡೆಸದಂತೆ ತ್ರಿಪುರಾ ರಾಜ್ಯದ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಶಾಲಾ ಅವಧಿಯಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದ ಶಾಲೆಗಳ ಮುಖ್ಯೋಪಾಧ್ಯಾಯರ ವಿರುದ್ಧ ಶಿಕ್ಷಣ ಇಲಾಖೆಗೆ ವರದಿ ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಅದರ ಜೊತೆಗೆ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ, ಶಿಕ್ಷಣ ಇಲಾಖೆಯಿಂದ ಎನ್‌ಒಸಿ ತೆಗೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
ಆಟದ ಮೈದಾನ ಸೇರಿದಂತೆ ಯಾವುದೇ ಶಾಲಾ ಸಂಪನ್ಮೂಲಗಳನ್ನು ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟಕರು ತಮ್ಮ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಬಳಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಚಾಂದಿನಿ ಚಂದ್ರನ್ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ಕೋವಿಡ್ ನಿಯಂತ್ರಣಕ್ಕೆ ಹೇರಲಾದ ಲಾಕ್ಡೌನ್ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಿದೆ. ಆದ್ದರಿಂದ ಶಾಲಾ ಸಮಯದಲ್ಲಿ ದೈಹಿಕ ತರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಮತ್ತು ಇಲಾಖೆಯ ನಿಯಮಗಳನ್ನು ಉಲ್ಲಂಘಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: 50 ವರ್ಷಗಳಿಂದ ಮಸೀದಿ ನಿರ್ವಹಣೆ ಮಾಡುತ್ತಿದೆ ಹಿಂದೂ ಕುಟುಂಬ
ಯಾವುದೇ ಶಿಕ್ಷಣ ಸಂಸ್ಥೆಯು ಅನುಮತಿ ಪಡೆಯದೆ ರಾಜಕೀಯ ಚಟುವಟಿಕೆಯನ್ನು ಶಾಲಾ ಆವರಣದಲ್ಲಿ ನಡೆಸುತ್ತಿರುವುದು ಕಂಡುಬಂದರೆ ಈ ವಿಚಾರವನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಿಳಿಸಬೇಕು. ವಿಷಯ ತಿಳಿದ ನಂತರ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.