ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರ ಗೃಹ ಸಚಿವಾಲಯವು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಉಗ್ರಗಾಮಿ ಸಂಘಟನೆ ಎಂದು ಗುರುವಾರ ಘೋಷಿಸಿದೆ. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಒಂದು ಶಾಖೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ 'ಟಿಆರ್‌ಎಫ್ ಸಂಘಟನೆಯು ಆನ್‌ಲೈನ್ ಮಾಧ್ಯಮದ ಮೂಲಕ ಯುವಕರ ದಾರಿ ತಪ್ಪಿಸುತ್ತಿದೆ. ಭಯೋತ್ಪಾದಕ ಚಟುವಟಿಕೆಗಳ ಕುರಿತು ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಭಯೋತ್ಪಾದಕರ ನೇಮಕಾತಿ, ಉಗ್ರರ ಒಳನುಸುಳುವಿಕೆ, ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಆನ್‌ಲೈನ್ ಮಾಧ್ಯಮದ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿದೆ' ಎಂದು ಹೇಳಿದೆ.
ಟಿಆರ್‌ಎಫ್ ಕಮಾಂಡರ್ ಶೇಖ್ ಸಜ್ಜದ್ ಗುಲ್: ಕಾಶ್ಮೀರ ಪಂಡಿತರ ಹತ್ಯೆಗೆ ಟಿ.ಆರ್.ಎಫ್. ಉಗ್ರ ಸಂಘಟನೆ ಬೆದರಿಕೆ ಹಾಕಿತ್ತು. ಜಮ್ಮು ಮತ್ತು ಕಾಶ್ಮೀರದ ಜನರನ್ನು ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಎಟ್ಟಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ, 1967ರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಈ ಆದೇಶ ಹೊರಡಿಸಲಾಗಿದೆ. ಶೇಖ್ ಸಜ್ಜದ್ ಗುಲ್ ಡಿ ರೆಸಿಸ್ಟೆನ್ಸ್ ಫ್ರಂಟ್ನ ಕಮಾಂಡರ್ ಆಗಿದ್ದಾನೆ ಎಂದು 1967ರ ಕಾಯ್ದೆಯ ನಾಲ್ಕನೇ ಷೆಡ್ಯೂಲ್ ಪ್ರಕಾರ ಗೃಹ ಸಚಿವಾಲಯ ಘೋಷಿಸಿದೆ.
ಇದನ್ನೂ ಓದಿ: ಕಾಶ್ಮೀರ ಪಂಡಿತರ ಪಟ್ಟಿ ಬಿಡುಗಡೆ ಮಾಡಿ ಹತ್ಯೆಗೆ ಸ್ಕೆಚ್.. ಕಣಿವೆ ಬಿಟ್ಟು ಹೋಗುವಂತೆ ಬೆದರಿಕೆ
ಟಿಆರ್‌ಎಫ್‌ನ ಚಟುವಟಿಕೆಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಹಾನಿಕಾರಕವಾಗಿದ್ದು, ಈ ಸಂಘಟನೆಯ ಸದಸ್ಯರು ಮತ್ತು ಸಹಚರರ ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಈ ಸಂಘಟನೆಯು ಭಾರತದಲ್ಲಿ ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಟಿಆರ್‌ಎಫ್ 2019ರಲ್ಲಿ ಅಸ್ತಿತ್ವಕ್ಕೆ ಬಂದಿತು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾಗಿ ದಿ ರೆಸಿಸ್ಟೆನ್ಸ್ ಫ್ರಂಟ್ 2019 ರಲ್ಲಿ ಮುನ್ನಲೆಗೆ ಬಂತು. ಆ ನಂತರ ಸಂಘಟನೆಯು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಆನ್‌ಲೈನ್ ಮಾಧ್ಯಮ (ಸಾಮಾಜಿಕ ಜಾಲತಾಣಗಳನ್ನು) ಬಳಸಿಕೊಂಡು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂಬ ಅಂಶ ಹೊರಬಿದ್ದ ಕಾರಣ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಇಬ್ಬರು ಎಲ್‌ಇಟಿ/ಟಿಆರ್‌ಎಫ್ ಉಗ್ರರ ಬಂಧನ