ನವದೆಹಲಿ: ಭಾರತದಲ್ಲಿ ಕೆಲ ದಿನಗಳ ಹಿಂದೆ 1.40 ಲಕ್ಷ ಗಡಿಯಿಂದ ಕೆಳಗಿಳಿದಿದ್ದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 2,02,022ಕ್ಕೆ ಏರಿಕೆಯಾಗಿದೆ. ಮತ್ತೆ ಹೆಚ್ಚು ಕೇಸ್ಗಳು ಹಾಗೂ ಸಾವು ವರದಿಯಾಗುತ್ತಿವೆ.
ಕಳೆದ 24 ಗಂಟೆಗಳಲ್ಲಿ 24,882 ಪ್ರಕರಣ ಪತ್ತೆಯಾಗಿದ್ದು, 140 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,13,33,728ಕ್ಕೆ ಹಾಗೂ ಮೃತರ ಸಂಖ್ಯೆ 1,58,446ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,09,73,260 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಸೌಂಡಿಂಗ್ ರಾಕೆಟ್ ಆರ್ಹೆಚ್-560 ಉಡಾವಣೆ ಮಾಡಿದ ಇಸ್ರೋ
ಮಾರ್ಚ್ 12ರ ವರೆಗೆ 22,58,39,273 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,40,635 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಇನ್ನು ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರ ಬಳಿಕ ಇದೀಗ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಿಂದ ಈವರೆಗೆ ಒಟ್ಟು 2,82,18,457 ಮಂದಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 20,53,537 ಜನ ವ್ಯಾಕ್ಸಿನ್ ಪಡೆದಿದ್ದಾರೆ.