ನವದೆಹಲಿ: ಭಾರತದಲ್ಲಿ ಕೊರೊನಾಬ್ಬರ ಕಡಿಮೆಯಾಗಿದೆ ಎನ್ನುವಷ್ಟರಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೆಲ ದಿನಗಳಿಂದ 20 ಸಾವಿರಕ್ಕಿಂತ ಕಡಿಮೆ ಕೇಸ್ಗಳು ಪತ್ತೆಯಾಗುತ್ತಿತ್ತು. ಆದರೆ ನಿನ್ನೆ 22,854 ಪ್ರಕರಣಗಳು ಹಾಗೂ 126 ಸಾವು ವರದಿಯಾಗಿದೆ.
ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 1,12,85,561 ಹಾಗೂ ಮೃತರ ಸಂಖ್ಯೆ 1,58,189ಕ್ಕೆ ಏರಿಕೆಯಾಗಿದೆ. 1,09,38,146 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇನ್ನೂ 1,89,226 ಕೋವಿಡ್ ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಮಮತಾ ಪಾದ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿವೆ: ಮಾಹಿತಿ ನೀಡಿದ ವೈದ್ಯರು
ಮಾರ್ಚ್ 10ರ ವರೆಗೆ 22,42,58,293 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,78,416 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಕೂಡ ಯಶಸ್ವಿಯಾಗಿ ನಡೆಯುತ್ತಿದ್ದು, ಜನವರಿ 16ರಿಂದ ನಿನ್ನೆ ಸಂಜೆ 7 ಗಂಟೆಯವರೆಗೆ 2.52 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ.