ಪುಣೆ(ಮಹಾರಾಷ್ಟ್ರ): ಲಾಟರಿ ತಾಕಿ ಲಕ್ಷಾಧಿಪತಿಯಾದ್ರು ಅನ್ನೋ ಮಾತುಗಳನ್ನು ನಾವು ಕೇಳಿರ್ತೀವಿ. ಬೆಳೆ ಬೆಳೆದು ರೈತ ಕೋಟಿ ರೂಪಾಯಿ ಗಳಿಸಿದ ಅಂತ ಕೇಳಿರೋಕೆ ಸಾಧ್ಯವೇ ಇಲ್ಲವೇನೋ. ಆದರೆ, ಗಗನಕ್ಕೇರಿರುವ ಟೊಮೆಟೊ ದರ ಇಂಥದ್ದೊಂದು ಚಮತ್ಕಾರ ಮಾಡಿದೆ. ಮಹಾರಾಷ್ಟ್ರದ ರೈತರೊಬ್ಬರು 12 ಎಕರೆ ಜಮೀನಿನಲ್ಲಿ ಟೊಮೆಟೊ ಬಂಪರ್ ಬೆಳೆ ತೆಗೆದು ಒಂದೇ ತಿಂಗಳಿನಲ್ಲಿ ಮಿಲಿಯೇನರ್ ಆಗಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ತುಕಾರಾಂ ಭಾಗೋಜಿ ಗಾಯಕರ್ ಬೇಸಾಯದಲ್ಲಿ ಕೋಟಿ ಗಳಿಸಿದ ರೈತ. ಅವರಿಗೆ 18 ಎಕರೆ ಭೂಮಿ ಇದೆ. ಇದರಲ್ಲಿ 12 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಉಳಿದ 6 ಎಕರೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಟೊಮೆಟೊ ಕೃಷಿಯಲ್ಲಿ ತಮಗಿರುವ ತಿಳಿವಳಿಕೆಯಿಂದಾಗಿ ಉತ್ತಮ ಇಳುವರಿ ಪಡೆದಿದ್ದಾರೆ. ಒಂದೇ ತಿಂಗಳಲ್ಲಿ 13 ಸಾವಿರ ಕ್ರೇಟ್ ಟೊಮೆಟೊ ಮಾರಾಟ ಮಾಡಿ ಒಂದೂವರೆ ಕೋಟಿ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.
ತುಕಾರಾಂ ಅವರು ಪುಣೆಯ ನಾರಾಯಣಗಂಜ್ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ಗೆ 2,100 ರೂಪಾಯಿಯಂತೆ 13 ಸಾವಿರ ಕ್ರೇಟ್ ಟೊಮೆಟೊ ಮಾರಾಟ ಮಾಡಿದ್ದಾರೆ. ಇದಾದ ಬಳಿಕ ಮತ್ತೆ 900 ಬಾಕ್ಸ್ ಟೊಮೆಟೊ ಸೇಲ್ ಮಾಡಿ 18 ಲಕ್ಷ ರೂಪಾಯಿ ಗಳಿಸಿದ್ದಾರೆ.
ಪುತ್ರ, ಸೊಸೆ ನೆರವು; ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ತುಕಾರಾಂ ಅವರಿಗೆ ಪುತ್ರ ಈಶ್ವರ್ ಗಾಯಕರ್ ಮತ್ತು ಸೊಸೆ ಸೋನಾಲಿ ಅವರು ನೆರವಾಗಿದ್ದಾರೆ. ಬೀಜ ಬಿತ್ತುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗೂ ಎಲ್ಲವನ್ನೂ ಅವರು ನೋಡಿಕೊಂಡಿದ್ದಾರೆ. ಈಶ್ವರ್ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ, ಮಾರಾಟ ಮಾಡಿದ್ದಾರೆ. ನಾರಾಯಣಗಂಜ್‌ನ ಜುನು ಕೃಷಿ ಮಾರುಕಟ್ಟೆಯಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 125 ರೂ. ದರ ಇದ್ದು, 20 ಕೆಜಿ ಕ್ರೇಟ್ಗೆ 2,500 ರೂ.ನಂತೆ ಮಾರಾಟ ಕಾಣುತ್ತಿದೆ.
ಬದನೆಕಾಯಿಗೆ ಟೊಮ್ಯಾಟೊ ಕಸಿ: ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ರೈತರೊಬ್ಬರು ಬದನೆಕಾಯಿ ಬೆಳೆಗೆ ಟೊಮೆಟೊ ಕಸಿ ಮಾಡಿ ಕೋಟಿ ಆದಾಯ ಗಳಿಸಿದ್ದಾರೆ. ದಿನವೊಂದಕ್ಕೆ ಅವರು 600ರಿಂದ 700 ಕ್ರೇಟ್ ಟೊಮೆಟೊ ಮಾರಾಟ ಮಾಡುತ್ತಿದ್ದಾರೆ. ಬೀರನಪುರ ಗ್ರಾಮದ ಅರುಣ್ ಕುಮಾರ್ ಸಾಹು ಅವರು 300 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣದ ಮುಗಿಸಿರುವ ಸಾಹು ಅವರು ಕೃಷಿಯತ್ತ ಒಲವು ತೋರಿದರು. ಆರಂಭದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದರು. ಮಳೆಯಿಂದಾಗಿ ಬೆಳೆ ಹಾನಿಯುಂಟಾಗಿತ್ತು.
ಬಳಿಕ ಕೃಷಿ ತಜ್ಞರಿಂದ ಸಲಹೆ ಹೈಟೆಕ್ ಪದ್ಧತಿಯಲ್ಲಿ ಕೃಷಿ ಆರಂಭಿಸಿದರು. ಬದನೆಯೊಂದಿಗೆ ಟೊಮೆಟೊವನ್ನು ಕಸಿ ಮಾಡಿ ಬೆಳೆಸಿದರು. ಇದು ಉತ್ತಮ ಫಲಿತಾಂಶವನ್ನು ನೀಡಿತು. ಮಳೆಯಿಂದ ಬೆಳೆ ಕೂಡ ಉಳಿಯಿತು. ಇದು ರೈತನಿಗೆ ಲಾಭ ತಂದುಕೊಡುತ್ತಿದೆ.
ಇದನ್ನೂ ಓದಿ; Tomato price: 1 ಕೆಜಿ ಟೊಮೆಟೊಗೆ ₹250: ಕೇಂದ್ರ ಸರ್ಕಾರದಿಂದ ಈ ನಗರಗಳಲ್ಲಿ ₹90ಗೆ ಮಾರಾಟ