ಹೈದರಾಬಾದ್(ತೆಲಂಗಾಣ): ಟಾಲಿವುಡ್ ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಬಹುಭಾಷಾ ನಟಿ ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
2017ರಲ್ಲಿ ಹೈದರಾಬಾದ್ನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣ ತೆಲುಗು ಸಿನಿರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 12 ಮಂದಿ ಸಿನಿಮಾ ವಲಯದ ಗಣ್ಯರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿ, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ನಟಿಯ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ನಂತರ ಪ್ರತಿಕ್ರಿಯೆ ನೀಡಿದ ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನಾನು ವಿಚಾರಣೆಗೆ ಹಾಜರಾಗಿದ್ದೇನೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅವರು ಕೇಳಿದ ಬ್ಯಾಂಕ್ ದಾಖಲೆಗಳನ್ನು ನಾನು ನೀಡಿದ್ದೇನೆ. ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಹೆಚ್ಚನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
2017ರಲ್ಲಿ ಈ ಡ್ರಗ್ಸ್ ಕೇಸ್ ಪತ್ತೆಯಾಗಿದ್ದು, ಆಗಿನಿಂದಲೂ ಚಾರ್ಮಿ ಕೌರ್ ವಿಚಾರಣೆಗೆ ಒಳಗಾಗುತ್ತಿದ್ದಾರೆ. ಈ ಪ್ರಕರಣದಲ್ಲಿ ವಿದೇಶಿಯರೂ, ಇನ್ನೂ ಹಲವು ತೆಲುಗು ಸಿನಿಮಾರಂಗದವರ ಹೆಸರೂ ಕೇಳಿಬಂದಿತ್ತು. ಇತ್ತೀಚೆಗಷ್ಟೇ ನಿರ್ದೇಶಕ ಪುರಿ ಜಗನ್ನಾಥ್ ಇ.ಡಿ ವಿಚಾರಣೆಗೆ ಒಳಪಟ್ಟಿದ್ದರು.
ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ಮೂರು ವರ್ಷಗಳ ಕಾಲ ಅತ್ಯಾಚಾರ: ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆ