ನವದೆಹಲಿ: ಜಪಾನ್ನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಲಿರುವ ಅಥ್ಲೀಟ್ಗಳೊಂದಿಗೆ ನಮೋ ಇಂದು ಸಂವಾದ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ವರ್ಚುವಲ್ ವೇದಿಕೆ ಮೂಲಕ ನಮೋ ಎಲ್ಲರೊಂದಿಗೂ ಮಾತನಾಡಲಿದ್ದು, ಅವರಲ್ಲಿ ಮತ್ತಷ್ಟು ಹುರುಪು ತುಂಬಲಿದ್ದಾರೆ.
2020ರ ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ಭಾರತದ ತಂಡ ಜುಲೈ 17ರಂದು ಪ್ರಯಾಣ ಬೆಳೆಸಲಿದೆ. ಪ್ರಮುಖ ಕ್ರೀಡಾಕೂಟದಲ್ಲಿ ಭಾಗಿಯಾಗಲು ಭಾರತದಿಂದ 120ಕ್ಕೂ ಹೆಚ್ಚಿನ ಅಥ್ಲೀಟ್ಗಳು ಅರ್ಹತೆ ಪಡೆದುಕೊಂಡಿದ್ದು, ಇವರು 18ಕ್ಕೂ ಹೆಚ್ಚಿನ ಕ್ರೀಡೆಗಳಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ. ಎಲ್ಲ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿರುವ ನಮೋ ಅವರೊಂದಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ, ಉತ್ತಮ ಪ್ರದರ್ಶನ ನೀಡುವಂತೆ ಉತ್ತೇಜನ ನೀಡಲಿದ್ದಾರೆ. ಇದರ ಜತೆಗೆ ಶುಭಾಶಯ ತಿಳಿಸಲಿದ್ದಾರೆ.
ಇದನ್ನೂ ಓದಿರಿ: ಮೂರು ತಲೆ ಇರುವ ಮಗುವಿಗೆ ಜನ್ಮ ನೀಡಿದ ತಾಯಿ!
ಈ ಕಾರ್ಯಕ್ರಮದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ. ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ ಕಿರೆನ್ ರಿಜಿಜು ಇರಲಿದ್ದಾರೆ.ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಫೆನ್ಸರ್ (ಭವಾನಿ ದೇವಿ) ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ನೇತ್ರಾ ಕುಮಾನನ್ ಅವರು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಮಹಿಳಾ ನಾವಿಕರಾಗಿದ್ದಾರೆ. ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಅವರು ಈಜು ಸ್ಪರ್ಧೆಯಲ್ಲಿ 'ಎ' ಅರ್ಹತಾ ಮಾನದಂಡ ಸಾಧಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾಗಿದ್ದಾರೆ.
ಈ ಸಲದ ಒಲಿಂಪಿಕ್ಸ್ ಉದ್ಘಾಟನೆ ವೇಳೆ ಬಾಕ್ಸರ್ ಎಂಸಿ ಮೇರಿ ಕೋಮ್ ಹಾಗೂ ಭಾರತದ ಪುರುಷರ ತಂಡದ ಹಾಕಿ ನಾಯಕ ಮನ್ಪ್ರೀತ್ ಸಿಂಗ್ ಭಾರತದ ಧ್ವಜ ಧಾರಕರಾಗಲಿದ್ದಾರೆ. ಭಜರಂಗ್ ಪುನಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದುಕೊಳ್ಳಲಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರವರೆಗೆ ಈ ಸಲದ ಕ್ರೀಡಾಕೂಟ ನಡೆಯಲಿದ್ದು, ಕೊರೊನಾ ಹಾವಳಿ ಕಾರಣ ಯಾವುದೇ ಪ್ರೇಕ್ಷಕರಿಗೆ ವಿಕ್ಷಣೆ ಮಾಡಲು ಅವಕಾಶ ನೀಡಿಲ್ಲ.