ಚೆನ್ನೈ(ತಮಿಳುನಾಡು): ಮೇಕೆದಾಟು ಅಣೆಕಟ್ಟು ಸಮಸ್ಯೆ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಜುಲೈ 12ರಂದು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಈ ಸಭೆಯನ್ನು ರೈತರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ತಮಿಳುನಾಡಿನ ಎಲ್ಲಾ ಪಕ್ಷಗಳು ಸರ್ವಾನುಮತದಿಂದ ನಡೆಸುವ ಸಭೆ ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಹೇಳಿದೆ.
ಕೆಲವು ದಿನಗಳ ಹಿಂದೆ ಸ್ಟಾಲಿನ್, ಸಿಎಂ ಬಿ.ಎಸ್.ಯಡಿಯುರಪ್ಪ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವನೆಯಲ್ಲಿರುವ ಮೇಕೆದಾಟು ಅಣೆಕಟ್ಟು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿದೆ ಮತ್ತು ತಮಿಳುನಾಡು ರೈತರ ಹಿತಾಸಕ್ತಿ ವಿರುದ್ಧವಾಗಿ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಬೇಡಿ ಎಂದು ತಮಿಳುನಾಡು ಸರ್ಕಾರಕ್ಕೆ ಸಿಎಂ ಬಿಎಸ್ವೈ ಕೂಡಾ ಇತ್ತೀಚೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯನ್ನು, ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ?
ತಮಿಳುನಾಡಿನ ರೈತರ ಹಿತಾಸಕ್ತಿ ಕಾಪಾಡಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಈ ಶಾಸಕಾಂಗ ಪಕ್ಷಗಳ ಸಭೆ ನಡೆಸಲಿದ್ದಾರೆ.