ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ಭವಿಷ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.
ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಮಮತಾ, ಈ ಸಭೆ ಸಾಕಷ್ಟು ಫಲಪ್ರದವಾಗಿದೆ. ಇದು ತುಂಬಾ ಒಳ್ಳೆಯ ಸಭೆ, ಈ ಮುಖಾಂತರ ಭವಿಷ್ಯದಲ್ಲಿ ಸಕಾರಾತ್ಮಕ ಫಲಿತಾಂಶ ಹೊರಬರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಾವು ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದೇವೆ. ಪೆಗಾಸಸ್, ಕೋವಿಡ್ ಪರಿಸ್ಥಿತಿ ಮತ್ತು ಪ್ರತಿಪಕ್ಷಗಳ ಐಕ್ಯತೆಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಮಾಹಿತಿ ನೀಡಿದರು. 2024 ರ ಚುನಾವಣೆಯಲ್ಲಿ ವಿರೋಧ ಪಕ್ಷವನ್ನು ಮುನ್ನಡೆಸುತ್ತೀರಾ ಎಂದು ಕೇಳಿದ್ದಕ್ಕೆ, ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡುವುದು ಅತ್ಯಗತ್ಯ. ಏಕಾಂಗಿಯಾಗಿ, ನಾನು ಏನೂ ಅಲ್ಲ , ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನಾನು ನಾಯಕಿಯಲ್ಲ, ನಾನು ಕೇಡರ್. ನಾನು ತಳಮಟ್ಟದಿಂದ ಬಂದ ವ್ಯಕ್ತಿ ಎಂದು ಪ್ರತಿಕ್ರಿಯಿಸಿದರು.
ಪೆಗಾಸಸ್ ಬಗ್ಗೆ ಮಾತನಾಡಿದ ಅವರು, ಪೆಗಾಸಸ್ ಬಗ್ಗೆ ಸರ್ಕಾರ ಏಕೆ ಉತ್ತರಿಸುತ್ತಿಲ್ಲ? ಜನರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಸಂಸತ್ತಿನಲ್ಲಿಯೇ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ ಅಂದರೆ ಬೇರೆ ಎಲ್ಲಿ ಈ ಕೆಲಸ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.