ಚಂದ್ರಪುರ (ಮಹಾರಾಷ್ಟ್ರ): ಸಂಪೂರ್ಣ ಮಹಾರಾಷ್ಟ್ರದಲ್ಲಿರುವ ಹುಲಿಗಳ ಪೈಕಿ ಅರ್ಧಕ್ಕೂ ಹೆಚ್ಚು ಹುಲಿಗಳು ಚಂದ್ರಪುರ ಜಿಲ್ಲೆಯೊಂದರಲ್ಲಿಯೇ ಇವೆ. ಇಲ್ಲಿನ ತಾಡೋಬಾ-ಅಂಧಾರಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹೆಚ್ಚೂ ಕಡಿಮೆ 150 ಹುಲಿಗಳಿವೆ. ಇನ್ನು ಜಿಲ್ಲೆಯ ಉಳಿದ ಭಾಗದ ಅರಣ್ಯದಲ್ಲಿ ಇನ್ನುಳಿದ 100 ಹುಲಿಗಳು ಆರಾಮವಾಗಿ ವಿಹರಿಸುತ್ತಿವೆ. ಹೀಗಾಗಿ ಚಂದ್ರಪುರ ಜಿಲ್ಲೆಯು ನಿಜವಾಗಿಯೂ ಹುಲಿಗಳ ಜಿಲ್ಲೆಯಾಗಿದೆ.
ಅತಿ ಹೆಚ್ಚು ಹುಲಿಗಳಿರುವ ಜಿಲ್ಲೆ ಇದು: ಗಢಚಿರೋಲಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಜಿಲ್ಲೆಯಾಗಿದೆ. ಇದರ ನಂತರ ಬರುವುದೇ ಚಂದ್ರಪುರ ಜಿಲ್ಲೆ. ಚಂದ್ರಪುರ ಜಿಲ್ಲೆಯಲ್ಲಿನ ತಾಡೋಬಾ-ಅಂಧಾರಿ ಹುಲಿ ಸಂರಕ್ಷಿತಾರಣ್ಯ ರಾಜ್ಯದ ಅತಿದೊಡ್ಡ ಹುಲಿ ಸಂರಕ್ಷಿತಾರಣ್ಯವಾಗಿದೆ. ಸುಮಾರು 625 ಚದರ ಕಿಲೋಮೀಟರ್ಗಳಷ್ಟು ವ್ಯಾಪ್ತಿಯಲ್ಲಿ ಈ ಅರಣ್ಯ ವ್ಯಾಪಿಸಿಕೊಂಡಿದೆ.
ಬ್ರಹ್ಮಪುರಿ, ವರೋರಾ, ಸಾವಲಿ, ಸಿಂದೇವಾಹಿ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ. ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ತಾಲೂಕುಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಈ ಸಂಘರ್ಷದಲ್ಲಿ ಒಂದೊಮ್ಮೆ ಮನುಷ್ಯರು ಪ್ರಾಣ ಕಳೆದುಕೊಂಡರೆ ಇನ್ನು ಕೆಲವೊಮ್ಮೆ ಹುಲಿಗಳು ಸಾಯುತ್ತವೆ.
ಅರಣ್ಯ ಅತಿಕ್ರಮಣದ ಹಾವಳಿ: ಇತ್ತೀಚೆಗೆ ಈ ಪ್ರದೇಶಗಳಲ್ಲಿ ಅರಣ್ಯ ಅತಿಕ್ರಮಣ ಹೆಚ್ಚಾಗುತ್ತಿದ್ದು, ಅರಣ್ಯದಲ್ಲಿ ಕೃಷಿ ಮಾಡಲಾಗುತ್ತಿದೆ. ಆದರೆ ಬೆಳೆಗಳನ್ನು ತಿನ್ನುವ ಪ್ರಾಣಿಗಳ ಹಾವಳಿಯಿಂದ ಕೃಷಿಗೆ ಅಪಾರ ನಷ್ಟವಾಗುತ್ತಿದೆ. ಇದರಿಂದ ಪಾರಾಗಲು ರೈತರು ಕೆಲವೊಮ್ಮೆ ವಿಪರೀತ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ.
ಪ್ರಾಣಿಗಳು ಜಮೀನಿಗೆ ನುಗ್ಗದಂತೆ ರೈತರು ಅಳವಡಿಸುವ ವಿದ್ಯುತ್ ಬೇಲಿಗಳಿಗೆ ಸಿಲುಕಿ ಹುಲಿಗಳು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂತಹ ಪ್ರಕರಣ ಘಟಿಸಿದಾಗ ಅದನ್ನು ಅಲ್ಲಿಯೇ ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತದೆ. ಅನೇಕ ಬಾರಿ ಅದೆಷ್ಟೋ ದಿನಗಳು, ತಿಂಗಳುಗಳ ನಂತರ ಇಂಥ ಪ್ರಕರಣಗಳು ಬೆಳಕಿಗೆ ಬರುತ್ತವೆ. ಹೀಗೆ ಹುಲಿಗಳು ಸಾಯುವುದನ್ನು ತಡೆಗಟ್ಟುವ ದೊಡ್ಡ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ.
ಇನ್ನು ಕೆಲವೆಡೆ ಪ್ರಾಣಿಗಳ ಮಾಂಸ, ಚರ್ಮ ಹಾಗೂ ಕೊಂಬುಗಳಿಗಾಗಿ ಪ್ರಾಣಿಗಳನ್ನು ಬೇಟೆಯಾಡಲಾಗುತ್ತದೆ. ಹೀಗೆ ಪ್ರಾಣಿಗಳನ್ನು ಬೇಟೆಯಾಡಲು ಹಾಕಿರುವ ಉರುಳು ಅಥವಾ ಬಲೆಗಳಿಗೆ ಬಿದ್ದು ಹುಲಿಗಳು ಸಹ ಸಾಯುತ್ತವೆ. ಇದನ್ನೆಲ್ಲ ತಡೆದು, ಹುಲಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗುವುದು ಅತ್ಯಂತ ಅಗತ್ಯವಾಗಿದೆ.