ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಜೊತೆಗೆ ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಭಾರತೀಯ ಸೇನೆಯ ನೀಡಿದ ವಿವರಗಳ ಪ್ರಕಾರ, ''ಸೇನೆಯ 42 ಆರ್ಆರ್ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬೆಂಬಲದೊಂದಿಗೆ ದಕ್ಷಿಣ ಪಟ್ಟಣದ ಟ್ರಾಲ್‌ನ ಪಾಂಜೊ ಮತ್ತು ಗಾಮ್ರಾಜ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಎರಡೂ ಸ್ಥಳಗಳಿಂದ ಮೂವರು ಶಂಕಿತರನ್ನು ಅರೆಸ್ಟ್ ಮಾಡಲಾಗಿದೆ. ಈ ಶಂಕಿತರ ಬಳಿಯಿದ್ದ ಎರಡು ಪಿಸ್ತೂಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಶಂಕಿತರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ನಂತರ, ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಮೂವರು ಆರೋಪಿಗಳ ಬಂಧನ: ಮೂವರು ಆರೋಪಿಗಳನ್ನು ಈ ಸಂಬಂಧ ಬಂಧಿಸಲಾಗಿದೆ. ಜೊತೆಗೆ ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದು ದೊಡ್ಡ ಯಶಸ್ಸು ಎಂದು ಸೇನೆ ಘೋಷಿಸಿದೆ. ಬಂಧಿತರ ವಿಚಾರಣೆ ಮುಂದುವರೆದಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪುಲ್ವಾಮಾದ ಟ್ರಾಲ್ ಸೂಕ್ಷ್ಮ ಪ್ರದೇಶ: ಪುಲ್ವಾಮಾದ ಟ್ರಾಲ್ ಪ್ರದೇಶವನ್ನು ಈಗಾಗಲೇ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಈ ಪ್ರದೇಶದಲ್ಲಿ ಉಗ್ರಗಾಮಿಗಳು ಬೀಡು ಬಿಟ್ಟಿದ್ದರು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದೆ. ಈ ಹಿಂದೆ ಪುಲ್ವಾಮಾ ಟ್ರಾಲ್ನಲ್ಲಿ ಸೇನೆಯು ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡಿತ್ತು. ಹಿಜ್ಬುಲ್ ಮುಜಾಹಿದೀನ್‌ನ ಪ್ರಸಿದ್ಧ ಕಮಾಂಡರ್ ಬುರ್ಹಾನ್ ವಾನಿ ಕೂಡ ಅದೇ ಪ್ರದೇಶಕ್ಕೆ ಸೇರಿದವನು. ಅವನ ಮರಣದ ನಂತರ, ಕಾಶ್ಮೀರ ಕಣಿವೆಯಲ್ಲಿ ಉಗ್ರ ಚುಟುವಟಿಕೆಗಳು ಮುಂದುವರೆದಿದ್ದವು.
ಇತ್ತೀಚಿನ ಪ್ರಕರಣ, ಮೂವರು ನಾಗರಿಕರ ಹತ್ಯೆ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಾನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದರು. ಈ ಸ್ಥಳದ ಸಮೀಪದಲ್ಲೇ ಮೂವರು ನಾಗರಿಕರ ಮೃತದೇಹಗಳು ಅನುಮಾನಾಸ್ಪದವಾಗಿ ಪತ್ತೆಯಾಗಿದ್ದವು. ಈ ಕುರಿತು ಭಾರತೀಯ ಸೇನೆಯು ನ್ಯಾಯಾಂಗ ತನಿಖೆಗೆ ಆದೇಶ ನೀಡಿತ್ತು.
ಗುರುವಾರ (ಡಿ.21ರಂದು) ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಾಲ್ವರು ಸೈನಿಕರು ಹುತಾತ್ಮರಾಗಿದ್ದರು. ಮೂವರು ಗಾಯಗೊಂಡಿದ್ದರು. ಪೂಂಚ್ ಜಿಲ್ಲೆಯ ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ನಿವಾಸಿಗಳಾದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಹಾಗೂ ಶಬೀರ್ ಅಹ್ಮದ್ (32) ಎಂಬ ಮೂವರು ನಾಗರಿಕರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಮುಂಬೈಗೆ ಬಂದಿಳಿದ ಮಾನವ ಕಳ್ಳಸಾಗಣೆ ಎಂದು ಶಂಕಿಸಿ ಫ್ರಾನ್ಸ್‌ನಲ್ಲಿ ತಡೆದಿದ್ದ ವಿಮಾನ; 303 ಜನರು ಸೇಫ್