ಡಿಯೋರಿಯಾ (ಉತ್ತರಪ್ರದೇಶ): ಶುಕ್ರವಾರ ಬೆಳ್ಳಂಬೆಳಗ್ಗೆ ಡಿಯೋರಿಯಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅನಿಯಂತ್ರಿತ ಕಂಟೈನರ್ವೊಂದು ಮನೆಯೊಳಗೆ ನುಗ್ಗಿದ್ದು, ಮೂವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಅಪಘಾತದಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ ದಟ್ಟ ಮಂಜಿನಿಂದಾಗಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಯೋರಿಯಾದಲ್ಲಿ ಅತೀ ಹೆಚ್ಚು ಚಳಿ ಇದ್ದು, ಇಲ್ಲಿನ ಕೆಲವರು ಬೆಳಗ್ಗೆ ಮೈ ಕಾಯಿಸಿಕೊಳ್ಳಲು ರಸ್ತೆ ಬದಿ ಮತ್ತು ಮನೆ ಮುಂದೆ ಬೆಂಕಿ ಹಚ್ಚುತ್ತಾರೆ. ಇಂದು ಬೆಳಗ್ಗೆ ರಸ್ತೆಬದಿಯಲ್ಲಿ ಕೆಲವರು ಬೆಂಕಿ ಹಚ್ಚಿ ಮೈ ಬೆಚ್ಚನೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮಂಜಿನಿಂದಾಗಿ ಕಂಟೈನರ್ವೊಂದು ಇವರ ಮೇಲೆ ಹರಿದಿದ್ದು, ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದೆ.
ಮದನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಾವ್ ಇಂಟರ್‌ಸೆಕ್ಷನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಬಗ್ಗೆ ಮಾತನಾಡಿದ ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದರು.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಕ್ ರಸ್ತೆಬದಿಯಲ್ಲಿ ನಿಂತಿದ್ದ ಮೂವರ ಮೇಲೆ ಹರಿದಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ಮಾಹಿತಿ ನೀಡಿದರು.
ಈ ವಿಷಯಗಳನ್ನು ನೆನಪಿನಲ್ಲಿಡಿ..: ಸುರಕ್ಷಿತ ಚಾಲನೆಗಾಗಿ ನಿಮ್ಮ ವಾಹನದ ವೇಗವನ್ನು ನೀವು ಯಾವಾಗಲೂ ಕಡಿಮೆ ಇಟ್ಟುಕೊಳ್ಳುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಇದು ವಿಶೇಷವಾಗಿ ಗಮನಿಸಬೇಕಾದ ಅಂಶ. ನಿಮ್ಮ ಕಾರಿನ ವೇಗ ಕಡಿಮೆಯಿದ್ದರೆ, ಯಾವುದೇ ವಾಹನ, ವಸ್ತು, ವ್ಯಕ್ತಿ ಅಥವಾ ಪ್ರಾಣಿ ಇದ್ದಕ್ಕಿದ್ದಂತೆ ಬಂದಾಗ ನೀವು ವಾಹನವನ್ನು ನಿಯಂತ್ರಿಸಬಹುದಾಗಿದೆ. ಆದರೆ ಅತಿ ವೇಗದಲ್ಲಿ ವಾಹನವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಚಳಿಗಾಲದಲ್ಲಿ, ಶೀತವನ್ನು ತಪ್ಪಿಸಲು ಜನರು ಸಾಮಾನ್ಯವಾಗಿ ತಮ್ಮ ಕಾರಿನ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತಾರೆ. ಹಾಗೆ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಕಾರಿನ ಕಿಟಕಿಯನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಗಾಜಿನ ಮೇಲೆ ಮಂಜು ಸಂಗ್ರಹವಾಗುತ್ತದೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ವಾಹನಗಳು ಬಂದು ಹೋಗುವ ಸದ್ದು ಕೂಡ ಕೇಳಿಸುವುದಿಲ್ಲ. ವಾಹನ ಚಲಿಸುವಾಗ ನಿಮ್ಮ ವಾಹನದ ಕಿಟಕಿಯನ್ನು ಯಾವಾಗಲೂ ಸ್ವಲ್ಪ ತೆರೆದಿಡಿ. ಇದರಿಂದ ರಸ್ತೆಯಲ್ಲಿ ಬರುವ ಮತ್ತು ಹೋಗುವ ವಾಹನಗಳ ಶಬ್ದ ನಿಮಗೆ ಕೇಳುತ್ತದೆ.
ಚಾಲನೆ ಮಾಡುವಾಗ ನೀವು ಹೆಡ್ ಲೈಟ್ ಅನ್ನು ಹೈ ಬೀಮ್ ಮೋಡ್‌ನಲ್ಲಿ ಇರಿಸುವುದು ತಪ್ಪು. ಹೀಗೆ ಮಾಡುವುದರಿಂದ ಮಂಜು ಬೆಳಕಿನ ಪ್ರತಿಫಲನ ನಿಮ್ಮ ಕಣ್ಣಿಗೆ ಬೀಳುತ್ತದೆ. ಇದರಿಂದ ವಾಹನ ಚಾಲನೆಗೆ ತೊಂದರೆಯಾಗಬಹುದು. ಇದನ್ನು ತಪ್ಪಿಸಲು ವಾಹನದ ಬೆಳಕನ್ನು ಲೋ ಬೀಮ್ ಮೋಡ್‌ನಲ್ಲಿ ಇರಿಸಿ. ಇದರಿಂದ ಮಂಜಿನಲ್ಲೂ ಎದುರಿನಿಂದ ಬರುವ ವಾಹನವನ್ನು ನೀವು ನೋಡಬಹುದು.
ಇದನ್ನೂ ಓದಿ: ಎಸ್ಎಸ್ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ..