ತಿರುವನಂತಪುರಂ : ಕೇರಳ, ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಹಾಗೂ ಜಾರ್ಖಂಡ್ ಸೇರಿದಂತೆ ಹಲವಾರು ರಾಜ್ಯಗಳು ಈಗ ಹಕ್ಕಿ ಜ್ವರದ ಭೀತಿಯಲ್ಲಿವೆ.
ಹಕ್ಕಿ ಜ್ವರದಿಂದಾಗಿ ಕೇರಳದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು 12,000 ಬಾತುಕೋಳಿ ಸಾವನ್ನಪ್ಪಿವೆ. ಇನ್ನೂ 36,000 ಬಾತುಕೋಳಿ ಮೃತಪಡುವ ಸಾಧ್ಯತೆಯಿದೆ. ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಂಡುಬಂದಿದ್ದು, ಈ ಎರಡು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೇ ಇದನ್ನು 'ರಾಜ್ಯ ವಿಪತ್ತು' ಎಂದು ಕೇರಳ ಸರ್ಕಾರ ಘೋಷಿಸಿದೆ.
ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಸ್ಪಂದನಾ ತಂಡಗಳನ್ನು ಸ್ಥಾಪಿಸಲಾಗಿದೆ ಎಂದು ಎಂದು ಕೇರಳ ಅರಣ್ಯ ಸಚಿವ ಕೆ ರಾಜು ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶಂಕಿತ ಹಕ್ಕಿ ಜ್ವರದಿಂದಾಗಿ 1775ಕ್ಕೂ ಹೆಚ್ಚು ವಲಸೆ ಪಕ್ಷಿಗಳು ಬಲಿಯಾಗಿವೆ.
10 ಕಿ.ಮೀ ವ್ಯಾಪ್ತಿಯ ಪ್ರದೇಶಗಳನ್ನು ಅಲರ್ಟ್ ಝೋನ್ ಎಂದು ಘೋಷಿಸಲಾಗಿದ್ದು, ಅಲ್ಲಿ ಕೋಳಿ ಹಾಗೂ ಮೊಟ್ಟೆಗಳನ್ನು ಮಾರುವಂತಿಲ್ಲ ಎಂದು ರಾಜ್ಯ ಪಶುಸಂಗೋಪನಾ ಇಲಾಖೆ ಹೇಳಿದೆ.
ಇದನ್ನೂ ಓದಿ: ಕೊರೊನಾ ಬೆನ್ನಲ್ಲೇ ಕಾದಿದೆಯಾ ಮತ್ತೊಂದು ಗಂಡಾಂತರ: ಶುರುವಾಯ್ತು ಹಕ್ಕಿ ಜ್ವರದ ಭೀತಿ..?!
ಹರಿಯಾಣದಲ್ಲಿ ಸಾವಿರಾರು ಕೋಳಿಗಳು, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಾವಿರಾರು ಕಾಗೆಗಳು, ಪಾರಿವಾಳಗಳು ಸತ್ತು ಬೀಳುತ್ತಿವೆ. ಸತ್ತ ಪಕ್ಷಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಇನ್ನು, ಗುಜರಾತ್ನ ಮಾನವಾಡರ್ ಪ್ರದೇಶದ ಖಾರೊ ಜಲಾಶಯದ ಬಳಿ 53 ಪಕ್ಷಿಗಳು ಸತ್ತು ಬಿದ್ದಿದ್ದು, ವಿಷ ಪೂರಿತ ಆಹಾರ ಸೇವಿಸಿ ಮೃತಪಟ್ಟಿರಬಹುದು. ಸತ್ತ ಹಕ್ಕಿಗಳ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.