ಜುನಾಗಢ (ಗುಜರಾತ್): ಅಮ್ಮ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅಮ್ಮ ಮನೆಯಲ್ಲಿದ್ದರೆ ಎಲ್ಲವೂ ಇದ್ದಂತೆ. ಒಂದು ಕ್ಷಣ ತಾಯಿಯನ್ನು ಕಾಣದಿದ್ದರೆ ಮನಸ್ಸಿನಲ್ಲಿ ಕಳವಳ ಉಂಟಾಗುತ್ತದೆ. ಈ ಕಣ್ಣಿಗೆ ಕಾಣುವ ದೇವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇವರ ಋಣವನ್ನು ತೀರಿಸಲಂತೂ ಸಾಧ್ಯವೇ ಇಲ್ಲ. ಆದರೆ ಅಮ್ಮನ ಕೋಮಲ ಪ್ರೀತಿಗೆ ಪ್ರತಿಯಾಗಿ ನಾವು ಏನು ಕೊಡಬಹುದು ಎಂಬುದನ್ನು ಗುಜರಾತ್ನ ಈ ಮೂವರು ಸಹೋದರಿಯರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಹೌದು, ಜುನಾಗಢದ ಮೂವರು ಸಹೋದರಿಯರು ತಮ್ಮ ತಾಯಿಯ ಸವಿನೆನಪಿಗಾಗಿ ಮನೆಯಲ್ಲೇ ಅಮ್ಮನ ಪ್ರತಿಮೆಯನ್ನು ಸ್ಥಾಪಿಸಿ aದಕ್ಕೊಂದು ದೇವಾಲಯ ಕಟ್ಟಿದ್ದಾರೆ. ಈ ಸಹೋದರಿಯರು ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ತಮ್ಮ ತಾಯಿಗೆ ಗುಡಿಯನ್ನು ಕಟ್ಟಿ ಮೂರ್ತಿಯನ್ನು ಸ್ಥಾಪಿಸಿ ನಿತ್ಯವೂ ಪೂಜೆ ನೆರವೇರಿಸುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಮನೆಯ ಪ್ರೇರಣ ಶಕ್ತಿಯಾಗಿ ತಾಯಿಯನ್ನು ಪೂಜೆ ದಿನನಿತ್ಯ ಆರಾಧನೆ ಮಾಡುತ್ತಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಜೋಶಿ ಕುಟುಂಬಸ್ಥರು ಸಂತೋಷದಿಂದ ಜೀವನ ನಡೆಸುತ್ತಿದ್ದರು. ತಾಯಿ ತಂದೆ ಮತ್ತು ಮೂವರು ಹೆಣ್ಣುಮಕ್ಕಳ ತುಂಬು ಸಂಸಾರ. ಒಂದು ದಿನ ತಾಯಿ ಹೀರಾಬೆನ್ ಹಠಾತ್ ನಿಧನರಾದರು. ಈ ಘಟನೆಯಿಂದ ಈ ಕುಟುಂಬ ಕುಗ್ಗಿಹೋಯಿತು. ದೇವರ ಸಮಾನಾದ ತಾಯಿಯ ನಿಧನದಿಂದ ಸಹೋದರಿಯರಾದ ಶೀತಲ್, ಜಾನ್ವಿ, ಕಲ್ಪನಾ ತೀವ್ರ ಆಘಾತಕ್ಕೊಳಗಾಗಿದ್ದರು. ಹಲವು ದಿನಗಳ ದುಃಖದ ಬಳಿಕ ಮರಳಿ ಸಹಜ ಸ್ಥಿತಿಗೆ ಬಂದರೂ, ತಾಯಿಯ ನೆನಪು ಮಾತ್ರ ಅಂತೆಯೇ ಕಾಡುತ್ತಿತ್ತು. ಹೀಗಾಗಿ ತಮ್ಮ ತಾಯಿಯ ನೆನಪನ್ನು ಶಾಶ್ವತವಾಗಿ ಇಡಲು ಇವರು ನಿರ್ಧರಿಸಿದರು.
ಹಾಗಾಗಿ ಈ ಮೂವರು ಸಹೋದರಿಯರು ತಮ್ಮ ತಾಯಿ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿದರು. ತಾಯಿಯ ಮೂರ್ತಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ನೀಡುತ್ತಾರೆ. ಬಳಿಕ ಇವರು ಸೇವನೆ ಮಾಡುತ್ತಾರೆ. ಈ ತಾಯಿಯ ಉಪಸ್ಥಿತಿ ತಮಗೆ ಪ್ರೇರಕ ಶಕ್ತಿಯಾಗಿದೆ ಎಂದು ಸಹೋದರಿಯರು ಹೇಳುತ್ತಾರೆ. ಅಲ್ಲದೆ ತಮ್ಮ ತಾಯಿ ನಮ್ಮನ್ನು ಬಿಟ್ಟು ಅಗಲಿದ್ದರೂ, ಅವರು ಸದಾ ತಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಭಾವನೆ ಈ ಸಹೋದರಿಯರಲ್ಲಿದೆ. ಮನೆಯಲ್ಲಿ ಮಾಡುವ ಪ್ರತಿಯೊಂದು ಕಾರ್ಯದಲ್ಲಿ ತಾಯಿಯ ಉಪಸ್ಥಿತಿಯನ್ನು ಸಹೋದರಿಯರು ಕಾಣುತ್ತಾರೆ.
ತಮ್ಮ ಕಷ್ಟದ ದಿನಗಳಲ್ಲಿ ತಾಯಿ ಹೀರಾಬೆನ್ ಹೇಗೆ ನಮ್ಮನ್ನು ಸಾಕಿದರು. ನಮ್ಮ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ನೆನೆದು ತಾಯಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇವತ್ತಿಗೂ ಈ ಸಹೋದರಿಯರು ಯಾವುದೇ ಕಷ್ಟದ ಸಂದರ್ಭಗಳು ಬಂದಾಗ ಮನೆಯಲ್ಲಿರುವ ತಾಯಿಯ ವಿಗ್ರಹದ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳುತ್ತಾರೆ. ನಮ್ಮ ಬೆನ್ನ ಹಿಂದೆ ಯಾವಾಗಲೂ ತಂದೆ ತಾಯಿಯ ಆಶೀರ್ವಾದ ಸದಾ ಇರುತ್ತದೆ ಎಂದು ಸಹೋದರಿಯರು ಬಲವಾಗಿ ನಂಬಿದ್ದಾರೆ.
ಸದ್ಯ ಮೂವರು ಸಹೋದರಿಯರು ತಮ್ಮ ಮನೆಯಲ್ಲಿ ತಮ್ಮ ತಾಯಿಯ ಮೂರ್ತಿಯನ್ನು ಪೂಜಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೆರೆಹೊರೆಯವರು ಸಹೋದರಿಯರ ಮಾತೃ ವಾತ್ಸಲ್ಯವನ್ನು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ : ದೇಶಾದ್ಯಂತ ಬಣ್ಣ ಬಣ್ಣದ ರಂಗಿನ ಹೋಳಿ ಸಡಗರ- ವಿಡಿಯೋ ನೋಡಿ