ನಾಗ್ಪುರ್(ಮಹಾರಾಷ್ಟ್ರ): ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಆಗಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಿಂದ ದೇಶಕ್ಕೆ ಹಾನಿಯನ್ನುಂಟು ಮಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಿ ಕಾಶ್ಮೀರಿ ಫೈಲ್ಸ್ ಚಿತ್ರ ದೇಶದ ಸಾಮಾಜಿಕ ಏಕತೆ ಮತ್ತು ಸಮಗ್ರತೆಗೆ ಇನ್ನಿಲ್ಲದ ಹಾನಿಯನ್ನುಂಟು ಮಾಡುವ ಪರಿಸ್ಥಿತಿ ಸೃಷ್ಟಿ ಮಾಡ್ತಿದೆ ಎಂದರು.
1990ರಲ್ಲಿ ಕಾಶ್ಮೀರಿ ಪಂಡಿತರ ಸ್ಥಿತಿ-ಗತಿ ಕುರಿತಾಗಿ ನಮ್ಮ ಪಕ್ಷ ಮಾತನಾಡಿತ್ತು. ಕಾಶ್ಮೀರ ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರು ಈ ವಿಷಯ ಪ್ರಸ್ತಾಪ ಸಹ ಮಾಡಿದ್ದರು. ಕಾಶ್ಮೀರಿ ಪಂಡಿತರ ಆಸ್ತಿಯನ್ನ ಅಲ್ಲಿನ ಜನರು ಸಂರಕ್ಷಣೆ ಮಾಡಿದ್ದಾರೆ. 1989ರಿಂದ 90ರವರೆಗೆ ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕರಿಂದ ಹಲ್ಲೆ ನಡೆದಿದ್ದು, ಅನೇಕರನ್ನು ಕೊಂದಿದ್ದಾರೆ. ಆದರೆ, ಇತರೆ ಧರ್ಮದ 1,635 ಜನರು ಸಹ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: 'ದಿ ಕಾಶ್ಮೀರಿ ಫೈಲ್ಸ್' ಯಾರಿಗೆ ಬೇಕು? ವೋಟ್‌ಬ್ಯಾಂಕ್‌ಗೋಸ್ಕರ ರಾಜಕಾರಣ: ಕೆಸಿಆರ್
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿರೋಧ ಪಕ್ಷಗಳು ಮೈತ್ರಿ ಕುರಿತಾಗಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಜೆಪಿ ಪಕ್ಷದ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಕೆಲಸ ನಡೆಯುತ್ತಿದೆ ಎಂದರು. ದೇಶದ ಸಂವಿಧಾನ, ಆರ್ಥಿಕತೆ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ಸೋಲಿಸುವುದು ಅನಿವಾರ್ಯ ಎಂದು ಯೆಚೂರಿ ತಿಳಿಸಿದ್ದಾರೆ.