ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶ ಭಾರತದ ಅವಿಭಾಜ್ಯ ಭಾಗ ಎಂದು ಭಾರತ ಪುನರುಚ್ಚರಿಸಿದೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ)ನ ಚಟುವಟಿಕೆಗಳು ಅಥವಾ ಯೋಜನೆಗಳಿಗೆ ಭಾರತ ಆಕ್ಷೇಪಿಸುತ್ತದೆ. ಏಕೆಂದರೆ ಅದು ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆ" ಎಂದರು.
ಚೀನಾ ಮತ್ತು ಪಾಕಿಸ್ತಾನ ಸಿಪಿಇಸಿ ಯೋಜನೆಗಳನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಯೋಜಿಸುತ್ತಿದೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಗ್ಚಿ, "ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳನ್ನು ಯಾವುದೇ ಮೂರನೇ ದೇಶದಲ್ಲಿ ವಿಸ್ತರಿಸುವುದನ್ನು ಭಾರತ ಒಪ್ಪುವುದಿಲ್ಲ" ಎಂದು ಹೇಳಿದರು.
ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶದಲ್ಲಿರುವ ಸಿಪಿಇಸಿ ಎಂದು ಕರೆಯಲ್ಪಡುವ ಯೋಜನೆಗಳನ್ನು ನಾವು ವಿರೋಧಿಸುತ್ತೇವೆ. ಇಂತಹ ಚಟುವಟಿಕೆಗಳು ಅಂತರ್ಗತವಾಗಿ ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ ಎಂದು ಅವರು ತಿಳಿಸಿದರು.
ಇನ್ನು, ಮ್ಯಾನ್ಮಾರ್‌ನ ಮಿಲಿಟರಿ ಆಡಳಿತವು ಇತ್ತೀಚೆಗೆ ನಾಲ್ವರು ಪ್ರಜಾಪ್ರಭುತ್ವವಾದಿ ಹೋರಾಟಗಾರರನ್ನು ಗಲ್ಲಿಗೇರಿಸಿದ ಕುರಿತು ಪ್ರತಿಕ್ರಿಯಿಸಿದ ಬಾಗ್ಚಿ, "ಮ್ಯಾನ್ಮಾರ್‌ನಲ್ಲಿನ ಬೆಳವಣಿಗೆಗಳಿಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಪಾಲನೆಯಾಗಬೇಕು. ಮ್ಯಾನ್ಮಾರ್ ಪ್ರಜಾಪ್ರಭುತ್ವ ಮತ್ತು ಸ್ಥಿರತೆಗೆ ಮರಳಲು ಭಾರತ ಸದಾ ಬೆಂಬಲ ನೀಡುತ್ತದೆ" ಎಂದರು.
ಭಯೋತ್ಪಾದನಾ ಕೃತ್ಯಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ನಾಲ್ಕು ಪ್ರಜಾಪ್ರಭುತ್ವ ಕಾರ್ಯಕರ್ತರನ್ನು ಗಲ್ಲಿಗೇರಿಸಿರುವುದಾಗಿ ಮ್ಯಾನ್ಮಾರ್‌ನ ಆಡಳಿತ ಮಿಲಿಟರಿ ಸೋಮವಾರ(ಜು.25) ಘೋಷಿಸಿತ್ತು.
ಇದನ್ನೂ ಓದಿ: ಮ್ಯಾನ್ಮಾರ್ ಹಿಂಸಾಚಾರ: ಸಮಯೋಚಿತ ಬೆಂಬಲ, ಭದ್ರತಾ ಮಂಡಳಿಯ ಕ್ರಮ ಶ್ರೇಷ್ಠ ಎಂದ ಯುಎನ್ ರಾಯಭಾರಿ