ವರಂಗಲ್(ತೆಲಂಗಾಣ): ಜಿಲ್ಲೆಯ ಹನುಮಕೊಂಡ ಎಂಬಲ್ಲಿ 20 ವರ್ಷಗಳ ಹಿಂದೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ತನ್ನ ಅಂಗೈ ಕಳೆದುಕೊಂಡಿತ್ತು. ಪೋಷಕರು ನಿರಂತರ ಕಾನೂನು ಹೋರಾಟ ನಡೆಸಿದರೂ ನ್ಯಾಯ ಸಿಕ್ಕಿರಲಿಲ್ಲ. ಇದೀಗ ರಾಜ್ಯ ಗ್ರಾಹಕರ ಆಯೋಗವು ಮಗುವಿನ ಕುಟುಂಬಕ್ಕೆ ಬಡ್ಡಿಸಮೇತ ಪರಿಹಾರ ನೀಡುವಂತೆ ಆರೋಪ ಹೊತ್ತ ವೈದ್ಯರು ಮತ್ತು ವಿಮಾ ಕಂಪನಿಗೆ ಆದೇಶಿಸಿದೆ. ಆಯೋಗದ ಆದೇಶದಂತೆ ವೈದ್ಯರು ಮತ್ತು ವಿಮಾ ಕಂಪನಿ ಸೆಪ್ಟೆಂಬರ್ 2016 ರಿಂದ 16 ಲಕ್ಷ ರೂಪಾಯಿಗೆ ಶೇ.7ರ ಬಡ್ಡಿ ಸೇರಿ ಪರಿಹಾರ ಪಾವತಿಸಬೇಕಾಗಿದೆ.
2003ರಲ್ಲಿ ನಡೆದ ಪ್ರಕರಣ: 2003ರಲ್ಲಿ ಹನುಮಕೊಂಡದ ಅಮೃತಾ ನರ್ಸಿಂಗ್ ಹೋಂನಲ್ಲಿ ಜ್ವರವಿದ್ದ ಕಾರಣಕ್ಕೆ 4 ವರ್ಷದ ಮಗು ಸೌಮ್ಯಾಳನ್ನು ಪೋಷಕರು ದಾಖಲಿಸಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವಿನ ಕೈಗೆ ಸಲೈನ್ ಏರಿಸಲು ಇಂಜೆಕ್ಷನ್ ಪೈಪ್ ಅನ್ನು ಅಳವಡಿಸಬೇಕಿತ್ತು. ಆದ್ರೆ ಮಗುವಿನ ಕೈಗೆ ಇಂಜೆಕ್ಷನ್ ಪೈಪ್ ಅನ್ನು ಸರಿಯಾಗಿ ಅಳವಡಿಸದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ.
ಡಾ.ಜಿ.ರಮೇಶ್ ಎಂಬುವವರು ಚಿಕಿತ್ಸೆ ನೀಡಿ ಎರಡು ದಿನಗಳ ಬಳಿಕ ಡಿಸ್ಚಾರ್ಜ್ ಮಾಡಿದ್ದಾರೆ. ಸಲೈನ್ ಪೈಪ್ ಅಳವಡಿಸಲು ಇಂಜೆಕ್ಷನ್ ಕೊಟ್ಟಿದ್ದ ಬಲಗೈ ಊದಿಕೊಂಡಿದೆ. ಅಷ್ಟೇ ಅಲ್ಲ, ಮಗು ತೀವ್ರ ನೋವಿನಿಂದ ಬಳಲಿತ್ತು. ಪೋಷಕರು ಮತ್ತೊಮ್ಮೆ ವೈದ್ಯರನ್ನು ಸಂಪರ್ಕಿಸಿದಾಗ ಹೈದರಾಬಾದ್‌ನಲ್ಲಿರುವ ಮತ್ತೊಬ್ಬ ಖಾಸಗಿ ವೈದ್ಯರ ಬಳಿಗೆ ಹೋಗುವಂತೆ ಶಿಫಾರಸು ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ವಾರಂಗಲ್ ಎಂಜಿಎಂ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ವೈದ್ಯರು ಸೋಂಕಿತೆಯ ಅಂಗೈಯನ್ನೇ ತೆಗೆದಿದ್ದಾರೆ. ಇದರಿಂದ ಮಗು ಅಂಗವಿಕಲತೆಯಿಂದ ಬಳಲತೊಡಗಿತು.
ಇದನ್ನೂ ಓದಿ: ಲ್ಯಾಪ್‍ಟಾಪ್‍ನಲ್ಲಿ ದೋಷ: ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಲೆನೆವೊ ಕಂಪನಿಗೆ ಗ್ರಾಹಕರ ಕೋರ್ಟ್ ಆದೇಶ
ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗಳು ಅಂಗವಿಕಲಳಾಗಿದ್ದಾಳೆ ಎಂದು ಆರೋಪಿಸಿ ಸೌಮ್ಯ ತಂದೆ ರಮೇಶಬಾಬು ಜಿಲ್ಲಾ ಡಿಸ್ಟ್ರಿಕ್ಟ್ ಕನ್ಸ್ಯೂಮರ್ ಫೋರಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಫೋರಂ, 2016ರಲ್ಲಿ ವೈದ್ಯರು ಮತ್ತು ಯುನೈಟೆಡ್ ಇನ್ಶೂರೆನ್ಸ್ ಕಂಪನಿ ಜಂಟಿಯಾಗಿ ಮಗುವಿನ ಕುಟುಂಬಕ್ಕೆ 16 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಡಾ.ಜಿ.ರಮೇಶ್ ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ರಾಜ್ಯ ಗ್ರಾಹಕ ಆಯೋಗದಲ್ಲಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿ ಜೈಸ್ವಾಲ್, ಗ್ರಾಹಕ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾದ ಮೀನಾ ರಾಮನಾಥನ್ ಮತ್ತು ಕೆ.ರಂಗರಾವ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ. ಸಂತ್ರಸ್ತೆಯ ಕುಟುಂಬದ ಪರ ವಕೀಲ ವಿ.ಗೌರಿಶಂಕರ ರಾವ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಲೈನ್ ನೀಡಲು ಅಳವಡಿಸಬೇಕಾದ ಪೈಪ್ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದೆ. ಜಿಲ್ಲಾ ವೇದಿಕೆಯ ತೀರ್ಪು ಎತ್ತಿ ಹಿಡಿದ ನ್ಯಾಯಾಲಯ ವೈದ್ಯಾಧಿಕಾರಿ ಮತ್ತು ವಿಮಾ ಕಂಪನಿ ಮೇಲ್ಮನವಿಗಳನ್ನು ವಜಾಗೊಳಿಸಿತು. ವೈದ್ಯರು ಮತ್ತು ವಿಮಾ ಕಂಪನಿ ಜಂಟಿಯಾಗಿ ಸೆಪ್ಟೆಂಬರ್ 2016 ರಿಂದ 16 ಲಕ್ಷ ರೂ.ಗೆ ಶೇ.7ರ ಬಡ್ಡಿ ಸೇರಿಸಿ ಪರಿಹಾರ ಪಾವತಿಸಬೇಕೆಂದು ಆದೇಶಿಸಿದೆ.