ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಎಂದು ಮರು ನಾಮಕಾರಣ ಮಾಡಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸಿದ್ದಾರೆ. ತಮ್ಮ ರಾಜಕೀಯ ಅಧ್ಯಾಯಕ್ಕೆ ಬುಧವಾರ ಮಧ್ಯಾಹ್ನ 1.19 ಗಂಟೆಗೆ ನಿಗದಿಯಾಗಿದ್ದ ಶುಭ ಮುಹೂರ್ತದಲ್ಲಿ ಕೆಸಿಆರ್ ಬಿಆರ್ಎಸ್ ಪ್ರಕಟಿಸಿದರು.
ಹಲವು ದಿನಗಳಿಂದ ರಾಷ್ಟ್ರ ರಾಜಕಾರಣದ ಬಗ್ಗೆ ಒಲವು ತೋರಿದ್ದ ಕೆಸಿಆರ್ ಇತ್ತೀಚಿಗೆ ವಿವಿಧ ರಾಜಕೀಯ ಪಕ್ಷಗಳನ್ನು ನಾಯಕರನ್ನು ಭೇಟಿ ಮಾಡುವ ಮೂಲಕ ಇದಕ್ಕೆ ವೇಗ ನೀಡಿದ್ದರು. ಇದರ ಭಾಗಯಾಗಿಯೇ ಇಂದು ಸಿಎಂ ಕೆಸಿಆರ್ ಟಿಆರ್ಎಸ್ ಅನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವ ನಿರ್ಣಯವನ್ನು ಮಂಡಿಸಿದರು. ತೆಲಂಗಾಣ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು. ಈ ನಿರ್ಣಯಕ್ಕೆ ಸರಿಯಾಗಿ ಮಧ್ಯಾಹ್ನ 1.19 ಗಂಟೆಗೆ ಕೆಸಿಆರ್ ಸಹಿ ಹಾಕಿದರು.
![telangana-rashtra-samithi-turns-into-bharat-rashtra-samithi](https://etvbharatimages.akamaized.net/etvbharat/prod-images/16560631_thumb223222.jpg)
ಬಿಆರ್ಎಸ್ಗೆ ಹೆಚ್ಡಿಕೆ ಸಾಕ್ಷಿ: ಕೆಸಿಆರ್ ಅವರು ಭಾರತ್ ರಾಷ್ಟ್ರ ಸಮಿತಿ ರಚನೆಯ ನಿರ್ಣಯಕ್ಕೆ ಸಹಿ ಹಾಕುವ ಕ್ಷಣಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಸಾಕ್ಷಿಯಾದರು. ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮಾವಲವನ್ ಹಾಗೂ ತೆಲಂಗಾಣ ರಾಜ್ಯದ ಸಚಿವರು, ಪಕ್ಷದ ಶಾಸಕರು, ಸಂಸದರು, ಎಂಎಲ್‌ಸಿಗಳು ಮತ್ತು ಜಿಪಂ ಅಧ್ಯಕ್ಷರು ಸೇರಿದಂತೆ 283 ಪ್ರಮುಖ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಗತಿ ಭವನದಲ್ಲಿ ವಿಶೇಷ ಪೂಜೆ: ರಾಷ್ಟ್ರೀಯ ಪಕ್ಷದ ನಿರ್ಣಯಕ್ಕೆ ಸಹಿ ಹಾಕುವ ಮುನ್ನ ದಸರಾ ನಿಮಿತ್ತವಾಗಿ ಸಿಎಂ ಕೆಸಿಆರ್ ಪ್ರಗತಿ ಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ನಲ್ಲ ಪೋಚಮ್ಮ ದೇವಸ್ಥಾನದಲ್ಲಿ ಸಿಎಂ ಕೆಸಿಆರ್ ದಂಪತಿ ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ವೈದಿಕರ ಸಮ್ಮುಖದಲ್ಲಿ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಅಲ್ಲಿ ನೆರೆದಿದ್ದ ಎಲ್ಲರಿಗೂ ಸಿಎಂ ಬನ್ನಿ ವಿತರಿಸಿ ಪರಸ್ಪರ ಶುಭಾಶಯ ಕೋರಿದರು. ಬಳಿಕ ಸಿಎಂ ಕೆಸಿಆರ್ ಪ್ರಗತಿ ಭವನದಲ್ಲಿ ಆಯುಧಪೂಜೆ ನೆರವೇರಿಸಿದರು.
ದೆಹಲಿಯಲ್ಲಿ ಕಚೇರಿ ಸ್ಥಾಪನೆಗೆ ವ್ಯವಸ್ಥೆ ವೇಗ: ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತ್ ರಾಷ್ಟ್ರ ಸಮಿತಿ ಕಚೇರಿ ಸ್ಥಾಪಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸರ್ದಾರ್ ಪಟೇಲ್ ರಸ್ತೆಯಲ್ಲಿ ಭಾರತ್ ರಾಷ್ಟ್ರ ಸಮಿತಿ ಕಚೇರಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಜೋಧ್‌ಪುರ ರಾಜಮನೆತನದ ಬಂಗಲೆಯನ್ನು ಬಾಡಿಗೆಗೆ ಪಡೆಯಲಾಗಿದೆಯಂತೆ.
![telangana-rashtra-samithi-turns-into-bharat-rashtra-samithi](https://etvbharatimages.akamaized.net/etvbharat/prod-images/16560631_thumbn11111.jpg)
2001ರಲ್ಲಿ ಟಿಆರ್ಎಸ್ ಸ್ಥಾಪಿಸಿದ್ದ ಕೆಸಿಆರ್: 2001ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಕೆಸಿಆರ್ ಟಿಆರ್ಎಸ್ ಪಕ್ಷವನ್ನು ಸ್ಥಾಪಿಸಿದ್ದರು. ಇದಾದ 13 ವರ್ಷಗಳ ನಂತರ 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವನ್ನಾಗಿ ಅಂದಿನ ಯುಪಿಎ ಸರ್ಕಾರ ಘೋಷಿಸಿತ್ತು. ಬಳಿಕ ಹೊಸ ರಾಜ್ಯದಲ್ಲಿ ಮೊದಲ ಸರ್ಕಾರವನ್ನು ಕೆಸಿಆರ್ ರಚಿಸಿದ್ದರು. 2018ರಲ್ಲೂ ಟಿಆರ್ಎಸ್ ಮೂಲಕ ಮತ್ತೆ ಅಧಿಕಾರಕ್ಕೆ ಬಂದು ಎರಡನೇ ಅವಧಿಗೂ ಸಿಎಂ ಆಗಿದ್ದಾರೆ.
ಇದನ್ನೂ ಓದಿ: ಬದಲಾದ ಟಿಆರ್ಎಸ್.. ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್