ಹೈದರಾಬಾದ್: ಮಂಚಾಲ್ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ನ್ಯಾಯಾಲಯವು ಗುರುವಾರ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಿದೆ.
2016 ಫೆಬ್ರವರಿ 5 ರಂದು 24 ವರ್ಷದ ಮಹಿಳೆಯೊಬ್ಬರು, ಮಂಚಾಲ್ ನಿವಾಸಿಯಾದ ದುಸರಿ ರಾಜು ಅಲಿಯಾಸ್ ಕತಮ್ ರಾಜು ತನ್ನ 4 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಂಚಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಹಿನ್ನಲೆ: ದೂರಿನ ಪ್ರಕಾರ, ಆರೋಪಿ ಆಟವಾಡುತ್ತಿದ್ದ ಬಾಲಕಿಗೆ ಹಣದ ಆಮಿಷ ಒಡ್ಡಿ ಹತ್ತಿರದ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಮತ್ತೊಮ್ಮೆ ಇದೇ ರೀತಿ ಕೃತ್ಯ ಎಸಗಲು ಪ್ರಯತ್ನಿಸಿದಾಗ ಬಾಲಕಿ ಆತನಿಂದ ಓಡಿ ಹೋಗಿ ತನ್ನ ತಾಯಿ ಬಳಿ ಇಡೀ ಘಟನೆಯನ್ನು ವಿವರಿಸಿದ್ದಾಳೆ. ಈ ದೂರಿನ ಆಧಾರದ ಮೇಲೆ ಮಂಚಾಲ್ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಮಂಚಾಲ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸಾಕ್ಷಾಧಾರಗಳ ಮೂಲಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಳಿಕ ಮತ್ತೊಬ್ಬ ಪೊಲೀಸ್ ಅಧಿಕಾರಿ ಎಂ ಗಂಗಾಧರ್ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಹರೀಶ, ಅಪರಾಧಿ ದುಸಾರಿ ರಾಜುಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಿ ತೀರ್ಪು ನೀಡಿ ಬಾಲಕಿಗೆ ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: 10 ವರ್ಷದ ಮಗು ಕೊಂದು ರಕ್ತ ಕುಡಿದು ಅಮಾನವೀಯತೆ; ಮಹಿಳೆಗೆ ಜೀವಾವಧಿ ಶಿಕ್ಷೆ