ಹೈದರಾಬಾದ್(ತೆಲಂಗಾಣ): ದಿ ಕಾಶ್ಮೀರಿ ಫೈಲ್ಸ್, ಬೆಂಬಲ ಬೆಲೆಯಲ್ಲಿ ರಾಜ್ಯದ ರೈತರ ಭತ್ತ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೆಲಂಗಾಣ ಸಿಎಂ ಕೆಸಿಆರ್ ವಾಗ್ದಾಳಿ ನಡೆಸಿದ್ದಾರೆ.
ದಿ ಕಾಶ್ಮೀರಿ ಫೈಲ್ಸ್ ಏನು? ದೇಶದಲ್ಲಿ ಪ್ರಗತಿಪರ ಸರ್ಕಾರವಿದ್ದರೆ ನೀರಾವರಿ ಯೋಜನೆಗಳು, ಆರ್ಥಿಕ ಅಭಿವೃದ್ಧಿಗಳ ಬಗ್ಗೆ ವಿಚಾರ ಮಾಡುತ್ತಿತ್ತು. ಈ ಕಾಶ್ಮೀರಿ ಫೈಲ್ಸ್ ಸಿನಿಮಾ ಯಾರಿಗೆ ಬೇಕು, ಅದರಿಂದ ಯಾರಿಗೆ ಲಾಭ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿರುವ ಕಾಶ್ಮೀರಿ ಪಂಡಿತರು ಇದನ್ನು ಕೆಲವರು ವೋಟ್ ಬ್ಯಾಂಕ್ಗೋಸ್ಕರ ಮಾಡುತ್ತಿರುವ ಕಸರತ್ತು ಎನ್ನುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ ಎಂದು ಹೇಳುತ್ತಿರುವುದಾಗಿ ಕೆಸಿಆರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿರುವ ಕೆಸಿಆರ್, ಬೆಂಬಲ ಬೆಲೆ ನೀಡಿ ರಾಜ್ಯದ ಭತ್ತ ಖರೀದಿ ವಿಚಾರವಾಗಿ ಕೇಂದ್ರದ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಾ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕೇಂದ್ರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತೇವೆ. ರೈತರ ಬೆಳೆ ಖರೀದಿಗೆ ಶೇ. 100ರಷ್ಟು ಆದೇಶ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಣಿಪುರ ಸಿಎಂ ಆಗಿ ಬಿರೇನ್ ಸಿಂಗ್ ಪ್ರಮಾಣ: ಭ್ರಷ್ಟಾಚಾರ ಮುಕ್ತ ರಾಜ್ಯದ ಪಣ
ಯಾಸಂಗಿ ಬೆಳೆ ಖರೀದಿಗೋಸ್ಕರ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ನಮ್ಮ ಸಚಿವರು ನಾಳೆ ದೆಹಲಿಗೆ ತೆರಳಲಿದ್ದು, ಕೇಂದ್ರವನ್ನು ಪ್ರಶ್ನಿಸಲಿದ್ದಾರೆ. ಭಾರತದಲ್ಲಿ ಆಹಾರ ಕ್ಷೇತ್ರ ಪ್ರಮುಖವಾಗಿದ್ದು, ಏಕರೂಪದ ಆಹಾರ ಧಾನ್ಯ ನೀತಿ ಜಾರಿಗೊಳ್ಳಬೇಕು ಎಂದು ಕೆಸಿಆರ್ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಪಡೆದುಕೊಳ್ಳಲಿದೆ ಎಂದು ನಾನು ಹೇಳಿದ್ದೆ. ಈ ಸಲದ ವಿಧಾನಸಭೆಯಲ್ಲಿ ಅದು ಸಾಬೀತುಗೊಂಡಿದೆ ಎಂದರು.