ಸಾಗರ್ (ಮಧ್ಯಪ್ರದೇಶ): ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತಮ್ಮ ಸ್ಕೂಟರ್‌ನಲ್ಲಿ ಮಿನಿ-ಸ್ಕೂಲ್ ಮತ್ತು ಲೈಬ್ರರಿಯನ್ನು ನಿರ್ಮಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಈ ಸ್ಕೂಟರ್ ಮೂಲಕ ಹಳ್ಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಇಂಥದೊಂದು ಸಮಾಜಮುಖಿ ಕಾರ್ಯ ಮಾಡುತ್ತಿರುವವರ ಹೆಸರು ಚಂದ್ರ ಶ್ರೀವಾಸ್ತವ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಕ್ಕಳಿದ್ದಲ್ಲಿಗೆ ತಾವೇ ತೆರಳಿ ಪಾಠ ಬೋಧಿಸುತ್ತಿದ್ದಾರೆ. ಮಕ್ಕಳಿಗಾಗಿ ಈ ಕಾರ್ಯ ಮಾಡುತ್ತಿರುವ ಶಿಕ್ಷಕನ ಕಾರ್ಯಕ್ಕೆ ಪೋಷಕರು ಧನ್ಯವಾದ ತಿಳಿಸಿದ್ದಾರೆ.
ಸ್ಕೂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಬಳಸುವ ಹಸಿರು ಫಲಕವನ್ನು ಅಳವಡಿಸಲಾಗಿದೆ. ಇನ್ನೊಂದು ಬದಿಯಲ್ಲಿ ಪಠ್ಯಪುಸ್ತಕಗಳು ಮತ್ತು ನೋಟ್‌ಬುಕ್‌ಗಳೊಂದಿಗೆ ಮಿನಿ ಲೈಬ್ರರಿ ನಿರ್ಮಾಣ ಮಾಡಲಾಗಿದೆ. ಕೆಲವು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇತರ ಪಠ್ಯಪುಸ್ತಕಗಳು ಮತ್ತು ಕಥೆಪುಸ್ತಕಗಳನ್ನು ನಿಗದಿತ ಸಮಯದೊಳಗೆ ಹಿಂದಿರುಗಿಸಲಾಗುವುದು ಎಂಬ ಷರತ್ತಿನ ಮೇಲೆ ನೀಡಲಾಗುತ್ತದೆ.
ಇದನ್ನು ಓದಿ: ಸಿಡಿ ಪ್ರಕರಣ:ಮಾಜಿ ಶಾಸಕ ನಾಗರಾಜ್, ವಕೀಲರ ಜೊತೆ ವಿಚಾರಣೆಗೆ ಆಗಮಿಸಿದ ಜಾರಕಿಹೊಳಿ
6 ನೇ ತರಗತಿಯ ವಿದ್ಯಾರ್ಥಿ ಕೇಶವ್ ಈ ಬಗ್ಗೆ ಮಾತನಾಡಿದ್ದು, "ಕೊರೊನಾ ಬಿಕ್ಕಟ್ಟು ಇರುವುದರಿಂದ ಗುರುಗಳು ಇಲ್ಲಿಗೆ ಬಂದು ನಮಗೆ ಗಣಿತ ಮತ್ತು ಇತರ ಅನೇಕ ವಿಷಯಗಳನ್ನು ಕಲಿಸುತ್ತಾರೆ" ಎಂದು ಖುಷಿ ವ್ಯಕ್ತಪಡಿಸಿದ.
ಇನ್ನು ಚಂದ್ರ ಶ್ರೀವಾಸ್ತವ್ ಮಾತನಾಡಿ, "ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸ್ಮಾರ್ಟ್‌ಫೋನ್‌ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಆನ್‌ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಅನೇಕ ಸ್ಥಳಗಳಲ್ಲಿ ನೆಟ್‌ವರ್ಕ್ ಸಂಪರ್ಕ ಸಮಸ್ಯೆಯಿದೆ. ನಾನು ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ನಲ್ಲಿ ತೋರಿಸುತ್ತಿದ್ದೆ. ಇದಾದ ಬಳಿಕ ಸ್ಕೂಟರ್ ಮೂಲಕ ತೆರಳಿ ಶಿಕ್ಷಣ ನೀಡುತ್ತಿದ್ದೇನೆ" ಎಂದರು.