ಚೆನ್ನೈ: ನೀಟ್ ಪರೀಕ್ಷೆಯನ್ನು ವಿರೋಧಿಸುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬಿಜೆಪಿಯೇತರ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತಮಿಳುನಾಡು ಸಂಸದರಾದ ಕಲಾನಿಧಿ ವೀರಸ್ವಾಮಿ ಮತ್ತು ಟಿಎಸ್‌ಕೆ ಇಳಂಗೋವನ್ ಸೋಮವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿ ಸಿಎಂ ಸ್ಟಾಲಿನ್ ಬರೆದ ಪತ್ರವನ್ನು ಹಸ್ತಾಂತರಿಸಿದರು.
![jagan](https://etvbharatimages.akamaized.net/etvbharat/prod-images/img-20211012-wa0012_1210newsroom_1634026858_119.jpg)
ಈ ನೀತಿ ರದ್ದುಗೊಳಿಸುವ ಕುರಿತು ಒಮ್ಮತ ಸಾಬೀತುಪಡಿಸಲು ತಮಿಳುನಾಡು ಸಿಎಂ ಬಿಜೆಪಿಯೇತರ ಆಡಳಿತವಿರುವ ಎಲ್ಲ ರಾಜ್ಯಗಳಿಗೂ ಪತ್ರ ರವಾನಿಸುತ್ತಿದ್ದಾರೆ. ಜಗನ್ ಅವರಿಗೆ ನೀಡಿದ ಪತ್ರದಲ್ಲಿ, ತಮಿಳುನಾಡು ಸಿಎಂ ಸ್ಟಾಲಿನ್, ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ಮತ್ತು ನಿರ್ವಹಿಸುತ್ತಿರುವ ಬೋಧನಾ ಆಸ್ಪತ್ರೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ, ಸ್ಟಾಲಿನ್ ನೀಟ್(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ್ ಪರೀಕ್ಷೆ) ನೀತಿಯು ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿದೆ ಮತ್ತು ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂದು ಪ್ರತಿಪಾದಿಸಿದ್ದು, ಕೇಂದ್ರದ ಧೋರಣೆಯನ್ನು ವಿರೋಧಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯಗಳ ಹಕ್ಕನ್ನು ಕೇಂದ್ರ ಕಸಿದುಕೊಂಡಿದೆ
ರಾಜ್ಯಗಳು ಸ್ಥಾಪಿಸಿರುವ ಮತ್ತು ನಿರ್ವಹಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಯಾರಿಗೆ ಪ್ರವೇಶ ಸಿಗಬೇಕು ಎಂದು ನಿರ್ಧರಿಸುವ ಅವಕಾಶವನ್ನು ನೀಟ್ ಮೂಲಕ ಕೇಂದ್ರ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿದೆ. ಅಧಿಕಾರ ಹಂಚಿಕೆಯ ಆಶಯದೊಂದಿಗೆ ಸಂವಿಧಾನವು ನೀಡಿರುವ ಅವಕಾಶಗಳನ್ನೂ ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಗಳ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ ಸಂವಿಧಾನಾತ್ಮಕ ಸಮತೋಲನವನ್ನು ಉಲ್ಲಂಘಿಸುತ್ತದೆ ಎಂದು "ಎಂದು ಸ್ಟಾಲಿನ್ ಅವರು ಪತ್ರದಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ರಾಜ್ಯ ಸರ್ಕಾರಗಳು ತಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ವಿಧಾನವನ್ನು ನಿರ್ಧರಿಸುವಲ್ಲಿ ತಮ್ಮ ಸಾಂವಿಧಾನಿಕ ಹಕ್ಕು ಮತ್ತು ಸ್ಥಾನವನ್ನು ಪ್ರತಿಪಾದಿಸಬೇಕಾಗಿದೆ, ಸ್ಟಾಲಿನ್ ತಮ್ಮ ಅಕ್ಟೋಬರ್ 1 ರ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪತ್ರದ ಜತೆ ನ್ಯಾ ರಾಜನ್ ಕಮಿಟಿ ಪ್ರತಿ ಲಗತ್ತಿಸಿದ ಸ್ಟಾಲಿನ್
ನ್ಯಾಯಮೂರ್ತಿ ಎಕೆ ರಾಜನ್ ಅವರ ಕಮಿಟಿಯ ಪ್ರತಿಯನ್ನು ಸಿಎಂ ಪತ್ರದ ಜೊತೆ ಲಗತ್ತಿಸಿದ್ದಾರೆ. ರಾಜನ್ ಸಮಿತಿ ವರದಿ ಆಧರಿಸಿ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ. ವಿದ್ಯಾರ್ಥಿಗಳು ಗಳಿಸಿದ 12 ನೇ ತರಗತಿಯ ಅಂಕಗಳ ಆಧಾರದ ಮೇಲೆ MBBS ಮತ್ತು BDS ಕೋರ್ಸ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಮಸೂದೆಯು ಬಯಸುತ್ತದೆ.
ಸೆಪ್ಟೆಂಬರ್ 13 ರಂದು ಅಂಗೀಕರಿಸಲಾದ ಮಸೂದೆಯ ಪ್ರತಿಯನ್ನು ಆಂಧ್ರ ಸಿಎಂಗೆ ಪತ್ರದೊಂದಿಗೆ ಲಗತ್ತಿಸಲಾಗಿದೆ. ಸ್ಟಾಲಿನ್ ಅವರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವಲ್ಲಿ ಆಯಾ ರಾಜ್ಯಗಳ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶಗಳಿಂದ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರು ಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಲು ನೀಟ್ ರದ್ದುಪಡಿಸಲು ತಮ್ಮ ಬೆಂಬಲವನ್ನು ವಿಸ್ತರಿಸುವಂತೆ ವಿನಂತಿಸಿದ್ದಾರೆ.
ಸಂವಿಧಾನದ ಆಶಯದಂತೆ ರಾಜ್ಯಗಳಿಗೆ ಹೆಚ್ಚಿನ ಅವಕಾಶ ನೀಡಬೇಕು
"ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ, ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ನಾವು ಒಗ್ಗಟ್ಟಿನ ಪ್ರಯತ್ನವನ್ನು ಮಾಡಬೇಕಾಗಿದೆ. ಈ ನಿರ್ಣಾಯಕ ವಿಷಯದಲ್ಲಿ ನಿಮ್ಮ ಸಹಕಾರಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ"ಎಂದು ಸ್ಟಾಲಿನ್ ಆಂಧ್ರಪ್ರದೇಶ, ಛತ್ತೀಸ್‌ಗಢ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.