ಚೆನ್ನೈ(ತಮಿಳುನಾಡು): ಮುಂಬರುವ ಟೋಕಿಯೊ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರ್ಜರಿ ಆಫರ್ ಘೋಷಿಸಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ರೀಡಾಪಟುಗಳಿಗೆ ವಿಶೇಷ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್ ಜುಲೈ 23ರಿಂದ ಜಪಾನ್ನ ಟೋಕಿಯೊದಲ್ಲಿ ಆರಂಭವಾಗುವ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಇದರ ಜೊತೆಗೆ ಬೆಳ್ಳಿಯ ಪದಕ ಗೆದ್ದವರಿಗೆ ಎರಡು ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಸ್ಟಾಲಿನ್ ಘೋಷಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ-ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ
ಟೋಕಿಯೊ ಒಲಿಂಪಿಕ್ಗೆ ತಮಿಳುನಾಡಿನಿಂದ ದೋಣಿ ಓಟ ಸ್ಪರ್ಧೆಯಲ್ಲಿ ನೇತ್ರಾ ಕುಮನಾನ್, ವರುಣ್ ಥಕ್ಕರ್, ಕೆ.ಸಿ. ಗಣಪತಿ, ಟೇಬಲ್ ಟೆನ್ನಿಸ್ನಲ್ಲಿ ಜಿ.ಸತೀಶನ್, ಎ. ಶರತ್ ಕಮಲ್, ಫೆನ್ಸಿಂಗ್ನಲ್ಲಿ ಭವಾನಿ ದೇವಿ ಮತ್ತು ಪ್ಯಾರಾ ಒಲಿಂಪಿಕ್ ಹೈಜಂಪ್ನಲ್ಲಿ ಟಿ.ಮಾರಿಯಪ್ಪನ್ ಭಾಗವಹಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಟೋಕಿಯೊ ಒಲಿಂಪಿಕ್ನಲ್ಲಿ ಭಾಗವಹಿಸುವ ಅಥ್ಲಿಟ್ಗಳಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತ್ತು.