ಕಲಮಶ್ಶೇರಿ (ಕೇರಳ): ಪ್ರಕರಣವೊಂದರ ಆರೋಪಿಗಳಿಂದ ಹಣ ಪಡೆದ ಆರೋಪದ ಮೇಲೆ ಕರ್ನಾಟಕದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೇರಳ ಕೊಚ್ಚಿ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 16ರಂದು ಮತ್ತೆ ಕಲಮಶ್ಶೇರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ಷರತ್ತಿನ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ದಾಖಲಾದ ಹಣಕಾಸು ವಂಚನೆ ಪ್ರಕರಣದಲ್ಲಿ ಕೊಚ್ಚಿಯ ಅಖಿಲ್ ಅಲ್ಬಿ ಮತ್ತು ನಿಖಿಲ್ ಜೋಸೆಫ್ ಎಂಬ ಯುವಕರು ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಿಂದ ಆರೋಪಿಗಳ ಹೆಸರನ್ನು ಕೈಬಿಡಲು ಕರ್ನಾಟಕ ಪೊಲೀಸ್ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿತ್ತು. ನಂತರ ಮಾತುಕತೆ ನಡೆದು ಇಬ್ಬರು ಆರೋಪಿಗಳಿಂದ ಒಟ್ಟೂ 4 ಲಕ್ಷ ರೂ. ಹಣ ಪಡೆದ ಆರೋಪ ಪ್ರಕರಣ ಇದಾಗಿದೆ.
ಷರತ್ತಿನ ಮೇಲೆ ಪೊಲೀಸರ ಬಿಡುಗಡೆ: ಈ ಹಣ ಪಡೆದ ಬಳಿಕವೂ ಓರ್ವ ಆರೋಪಿಯನ್ನು ಹಿಡಿದುಕೊಂಡು ಕರ್ನಾಟಕ ಪೊಲೀಸ್ ತಂಡ ರಾಜ್ಯಕ್ಕೆ ವಾಪಸಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಆರೋಪಿಗಳ ಪೈಕಿ ಓರ್ವನ ಸಂಬಂಧಿ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದರಿಂದ ಈ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೇ, ಈ ಹಿನ್ನೆಲೆಯಲ್ಲಿ ಕಲಮಶ್ಸೆರಿ ಪೊಲೀಸರು ವಾಹನ ತಡೆದು ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಈ ಕುರಿತು ತ್ರಿಕ್ಕಾಕರ ಎಸಿಪಿ ಪಿ.ವಿ. ಬೇಬಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ವಶಪಡಿಸಿಕೊಂಡ 3.95 ಲಕ್ಷ ರೂಪಾಯಿ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ಈ ಸಂಬಂಧ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ. ಈ ಮಧ್ಯೆ ತನಿಖೆಗೆ ಸಂಬಂಧಿಸಿದಂತೆ ಅಗತ್ಯಬಿದ್ದರೆ ಯಾವುದೇ ಸಮಯದಲ್ಲಿ ಕರೆಸಲಾಗುವುದು ಎಂಬುದಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಈ ಸಂಬಂಧ ತನಿಖೆಗಾಗಿ ಕರ್ನಾಟಕದ ಎಸಿಪಿ ನೇತೃತ್ವದ ಪೊಲೀಸ್ ತಂಡವೂ ಕೊಚ್ಚಿ ತಲುಪಿತ್ತು. ಏತನ್ಮಧ್ಯೆ, ಕರ್ನಾಟಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೊಚ್ಚಿಯ ಇಬ್ಬರು ಯುವಕರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೇ, ಬೆಂಗಳೂರು ವೈಟ್‌ಫೀಲ್ಡ್ ಪೊಲೀಸರು ದಾಖಲಿಸಿದ್ದ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣದಲ್ಲಿ ಈ ಇಬ್ಬರ ಬಂಧನಕ್ಕೆ ಹೈಕೋರ್ಟ್ ತಡೆ ನೀಡಿದೆ.
ಇದನ್ನೂ ಓದಿ: "ದಯವಿಟ್ಟು ನಿಮ್ಮ ಮಾಜಿ ಗೆಳೆಯನಿಗೆ ಫುಡ್ ಆರ್ಡರ್ ಮಾಡುವುದನ್ನು ನಿಲ್ಲಿಸಿ": ಪ್ರೇಮಿಗಳ ಜಗಳಕ್ಕೆ ತಲೆ ಕೆಡಿಸಿಕೊಂಡ ಜೊಮ್ಯಾಟೊ