ಅಗರ್ತಲಾ(ತ್ರಿಪುರಾ): ದನ ಕಳ್ಳತನ ಮಾಡಲು ಬಂದಿದ್ದಾರೆ ಎಂಬ ಅನುಮಾನದ ಮೇಲೆ ಓರ್ವನನ್ನು ಗ್ರಾಮಸ್ಥರು ಹತ್ಯೆ ಮಾಡಿದ ಘಟನೆ ಸೆಪಹಿಜಾಲಾ ಜಿಲ್ಲೆಯ ಕಮಲ್ ನಗರದಲ್ಲಿ ನಿನ್ನೆ (ಶನಿವಾರ) ತಡರಾತ್ರಿ ನಡೆದಿದೆ.
ಮೃತ ಯುವಕನ ಹೆಸರು ಪತ್ತೆಯಾಗಿಲ್ಲ. ಆದರೆ ಆತನ ಬಳಿ ಬಾಂಗ್ಲಾದೇಶದ ಕರೆನ್ಸಿ ಮತ್ತು ಮೊಬೈಲ್ ಫೋನ್ ದೊರೆತಿರುವುದರಿಂದ ಆತ ಬಾಂಗ್ಲಾದೇಶದ ಪ್ರಜೆ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಶನಿವಾರ ತಡರಾತ್ರಿ ಜಾನುವಾರು ಕದಿಯಲು ಒಟ್ಟು ಮೂರು ಜನರು ಗ್ರಾಮಕ್ಕೆ ಪ್ರವೇಶಿಸಿದ್ದಾರೆ. ಆಗ ಗ್ರಾಮಸ್ಥರು ಅವರನ್ನು ಹಿಡಿದಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ತ್ರಿಪುರಾ ನಿಷಿದ್ಧ ವಸ್ತುಗಳು ಮತ್ತು ಜಾನುವಾರುಗಳ ಕಳ್ಳಸಾಗಣೆಗೆ ಸಾಕ್ಷಿಯಾಗಿದೆ. 856 ಕಿ.ಮೀ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ತ್ರಿಪುರಾದಲ್ಲಿ ಅದರಲ್ಲೂ ವಿಶೇಷವಾಗಿ ಗಡಿ ಗ್ರಾಮದ ಬಳಿ ಈ ಮೊದಲು ದನಗಳ ಕಳ್ಳಸಾಗಣೆ ಸಾಮಾನ್ಯ ಸಮಸ್ಯೆಯಾಗಿತ್ತು.
ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಮಾಜಿ ಸೈನಿಕನ ಮನೆ ಬಳಿ ಗ್ರೆನೇಡ್ಗಳು ಪತ್ತೆ