ಲಖನೌ(ಉತ್ತರ ಪ್ರದೇಶ): ಲಖಿಂಪುರ ಹಿಂಸಾಚಾರ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರ ಬಗ್ಗೆ ನಾಳೆಯೊಳಗೆ ವಿವರವಾದ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಖ್ಯ ನಾಯಮೂರ್ತಿ ಎನ್.ವಿ.ರಮಣ, ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಹಿಮಾ ಕೊಹ್ಲಿ ನೇತೃತ್ವದ ಪೀಠ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾದ ಪ್ರಕರಣದ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಆರಂಭಿಸಿದೆ.
ಈ ಪ್ರಕರಣದಲ್ಲಿ ಬಂಧಿತರಾದವರು, ಆರೋಪಿಗಳು ಮತ್ತು ಯಾವ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮಗೆ ನಾಳೆಯೊಳಗೆ ಒದಗಿಸಬೇಕು ಎಂದು ಯುಪಿ ಸರ್ಕಾರಕ್ಕೆ ತಾಕೀತು ಮಾಡಿತು.
ಈ ವೇಳೆ ಕೋರ್ಟ್ಗೆ ಮಾಹಿತಿ ನೀಡಿದ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತನಿಖಾ ದಳ(ಎಸ್‌ಐಟಿ) ಮತ್ತು ಓರ್ವ ಸದಸ್ಯರಿರುವ ತನಿಖಾ ಆಯೋಗವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿತು.
ಈ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾ.ಪ್ರದೀಪ್ ಕುಮಾರ್ ಶ್ರೀವತ್ಸ ಅವರನ್ನು ನೇಮಕ ಮಾಡಲಾಗಿದೆ. ತನಿಖಾ ಆಯೋಗವು ಲಖಿಂಪುರದಲ್ಲಿಯೇ ಕಚೇರಿ ಹೊಂದಲಿದ್ದು, ಸುಮಾರು 2 ತಿಂಗಳೊಳಗೆ ವಿಸ್ತೃತ ತನಿಖಾ ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ: ಜಗತ್ತಿನ ಮೊಟ್ಟ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ