ನವದೆಹಲಿ: ಮಣಿಪುರ ಸೇರಿದಂತೆ ದೇಶಾದ್ಯಂತ ಮಹಿಳೆಯರ ಮೇಲೆ ನಡೆದ ಅವಮಾನ, ಶೋಷಣೆಗಳನ್ನು ಸುಪ್ರೀಂಕೋರ್ಟ್ ಖಂಡಿಸಿದೆ. ಅದರಲ್ಲೂ 'ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಘಟನೆಯನ್ನು ಕ್ಷಮಿಸಲು ಸಾಧ್ಯವಿಲ್ಲ' ಎಂದು ಇದೇ ವೇಳೆ ಹೇಳಿದೆ.
ಪಶ್ಚಿಮಬಂಗಾಳ, ಛತ್ತೀಸ್‌ಗಢ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.
ವಕೀಲರಾದ ಬಾನ್ಸುರಿ ಸ್ವರಾಜ್ ಅವರು ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಮಣಿಪುರದ ಘಟನೆಯಂತೆಯೇ ಹೋಲುತ್ತವೆ ಎಂದು ಪೀಠದ ಮುಂದೆ ಪ್ರಸ್ತಾಪಿಸಿದರು. ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸುಪ್ರೀಂಕೋರ್ಟ್ ಇದರ ಮೇಲೆ ನಿಗಾ ಇಟ್ಟಿದೆ ಎಂದು ಹೇಳಿದಾಗ, ವಕೀಲರಾದ ಸ್ವರಾಜ್ ಮಧ್ಯಪ್ರವೇಶಿಸಿ, ಕೋರ್ಟ್ನ ಕಾರ್ಯವಿಧಾನವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ದೇಶದ ಹೆಣ್ಣುಮಕ್ಕಳನ್ನು ರಕ್ಷಿಸಬೇಕು. ಈ ಬಗ್ಗೆ ಕ್ರಮ ವಹಿಸಿದ್ದಕ್ಕೆ ಕೃತಜ್ಞರಾಗಿದ್ದೇವೆ ಎಂದರು.
ಆಗ ಮುಖ್ಯ ನ್ಯಾಯಾಧೀಶರು, ನಿಸ್ಸಂದೇಹವಾಗಿ ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿವೆ. ಇದು ವಾಸ್ತವತೆಯ ಭಾಗವಾಗಿದೆ. ಮಣಿಪುರದ ಜನಾಂಗೀಯ ಸಂಘರ್ಷದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವು ಖಂಡನೀಯ. ಪಶ್ಚಿಮ ಬಂಗಾಳದಲ್ಲೂ ಇಂಥಹದ್ದೇ ಘಟನೆ ನಡೆದಿರುವುದು ಆತಂಕಕಾರಿ ಎಂದು ಹೇಳಿದರು. ಮಣಿಪುರ ಘಟನೆಯನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಈ ಎಲ್ಲಾ ಘಟನೆಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದೂ ಹೇಳಿದರು.
ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ 40-50 ಜನರ ಗುಂಪೊಂದು ಪಂಚಾಯತ್ ಚುನಾವಣೆಯ ವೇಳೆ ಮಹಿಳಾ ಅಭ್ಯರ್ಥಿಯನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಲಾಗಿದೆ. ಆಕೆಯನ್ನು ನಗ್ನವಾಗಿಸಿ ಮೆರವಣಿಗೆ ನಡೆಸಲಾಗಿದೆ. ಮಣಿಪುರದ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆದ ಮಹಿಳಾ ದೌರ್ಜನ್ಯ ಮತದಾರರನ್ನು ಹೆದರಿಸಲು ನಡೆಸಿದ ಗಂಭೀರವಾದ ಪ್ರಕರಣವಾಗಿದೆ ಎಂದು ವಕೀಲರು ಸುಪ್ರೀಂ ಪೀಠದ ಮುಂದೆ ಹೇಳಿದರು.
ಮಣಿಪುರದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ತೆಗೆದುಕೊಂಡ ಕ್ರಮಗಳನ್ನು, ಅದೇ ರೀತಿಯ ಘಟನೆಗಳು ನಡೆದಿರುವ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಕೇರಳದಲ್ಲಿಯೂ ತೆಗೆದುಕೊಳ್ಳಬೇಕು ಎಂದು ವಕೀಲರಾದ ಸ್ವರಾಜ್ ಅವರು ಒತ್ತಾಯಿಸಿದರು. ಈ ಕುರಿತು ದಾಖಲಾದ ಕೇಸ್ಗಳು ತನಿಖಾ ಹಂತದಲ್ಲಿವೆ.
ಇದನ್ನೂ ಓದಿ: ಸಂಸತ್ತಿನಲ್ಲಿ ನಿಲ್ಲದ 'ಮಣಿಪುರ' ಗದ್ದಲ; ಅವಿಶ್ವಾಸ ಮಂಡಿಸಿದ್ದರೂ ಮಸೂದೆಗಳ ಅಂಗೀಕಾರಕ್ಕೆ ವಿಪಕ್ಷಗಳ ವಿರೋಧ, ಬಿಜೆಪಿ ತಿರುಗೇಟು