ವಿಶಾಖಪಟ್ಟಣಂ(ಆಂಧ್ರಪ್ರದೇಶ): ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಯುಯು ಲಲಿತ್ ಅವರು ತಮ್ಮ ಪತ್ನಿ ಜೊತೆ ಮತ್ತೊಮ್ಮೆ ಮರು ವಿವಾಹ ಮಾಡಿಕೊಂಡಿದ್ದಾರೆ. ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂಧ್ರಪ್ರದೇಶದ ಅರಕು ಕಣಿವೆ ಸೌಂದರ್ಯ ವೀಕ್ಷಣೆ ಮಾಡಲು ಬಂದಿದ್ದ ನ್ಯಾಯಮೂರ್ತಿ ಲಲತ್ ಹಾಗೂ ಪತ್ನಿ ಅಮಿತಾ ಅಲ್ಲಿ ಬುಡಕಟ್ಟು ಸಮುದಾಯದ ರೀತಿ ವಿವಾಹ ಮಾಡಿಕೊಂಡಿದ್ದಾರೆ.
ನ್ಯಾಯಮೂರ್ತಿ ಲಲಿತ್ ತಮ್ಮ ಪತ್ನಿ ಜೊತೆಗೆ ಅರಕು ಕಣಿವೆಯ ಸೌಂದರ್ಯ ವೀಕ್ಷಣೆಗೆ ಬುಧವಾರ ವಿಶಾಖಪಟ್ಟಣಂಕ್ಕೆ ಆಗಮಿಸಿದ್ದರು. ಇವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಹೈಕೋರ್ಟ್ ನ್ಯಾಯಾಧೀಶ ಅಮಾನುಲ್ಲಾ ಖಾನ್ ಸಹ ಸಾಥ್ ನೀಡಿದ್ದರು.
ಇದನ್ನೂ ಓದಿ: ತಂದೆ ಕೈಗಾಡಿಯಲ್ಲಿ ಚಾಟ್ ಮಾರಾಟ: ಯುಪಿಎಸ್ಸಿಯಲ್ಲಿ 93ನೇ ರ‍್ಯಾಂಕ್ ಪಡೆದ ಮಗಳು
ಈ ವೇಳೆ, ಬುಡಕಟ್ಟು ಸಂಪ್ರದಾಯದಂತೆ ವಿವಾಹ ನಡೆಯುವ ಗಿರಿ ಗ್ರಾಮದರ್ಶಿನಿಗೆ ಭೇಟಿ ನೀಡಿದರು. ನ್ಯಾಯಮೂರ್ತಿ ಲಲಿತ್ ದಂಪತಿ ಮತ್ತೊಮ್ಮೆ ವಧು-ವರರಾಗಿದ್ದು, ಮರುಮದುವೆ ಮಾಡಿಕೊಂಡಿದ್ದಾರೆ. ಪೆಡಲಬೂಡು ಸರಪಂಚ್ ಪೆಟ್ಟೇಲಿ ದಾಸುಬಾಬು ನೇತೃತ್ವದಲ್ಲಿ ವಿವಾಹ ನೆರವೇರಿತು. ಇದಕ್ಕೂ ಮೊದಲು ಟಾಯ್ ರೈಲಿನಲ್ಲಿ ಪದ್ಮಾಪುರಂ ಉದ್ಯಾನ ಹಾಗೂ ಬುಡಕಟ್ಟು ಮ್ಯೂಸಿಯಂಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿರುವ ನ್ಯಾಯಮೂರ್ತಿ ಲಲಿತ್, ಬುಡಕಟ್ಟು ಸಮುದಾಯದ ಆತಿಥ್ಯ ಉತ್ತಮವಾಗಿದ್ದು, ವಿವಾಹ ಸಂಭ್ರಮ ಸಂತಸ ತಂದಿದೆ ಎಂದು ಹೇಳಿದರು.