ನವದೆಹಲಿ: ಟೆಕ್ ದೈತ್ಯಗಳಾದ ವಾಟ್ಸ್ಆ್ಯಪ್, ಫೇಸ್‌ಬುಕ್ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಭಾರತದಲ್ಲಿ ಗೌಪ್ಯತಾ ನೀತಿ ಪರಿಷ್ಕರಣೆ ಸಂಬಂಧ ಸಂದೇಶ ರವಾನೆಯ ಪ್ಲಾಟ್ ಫಾರ್ಮ್ಗಳಾದ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಕೇಂದ್ರ ಸರ್ಕಾರಕ್ಕೆ ಇಂದು ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಯುರೋಪ್ಗೆ ಹೋಲಿಸಿದರೆ ವಾಟ್ಸ್ಆ್ಯಪ್ ಭಾರತದಲ್ಲಿ ಗೌಪ್ಯತಾ ಗುಣಮಟ್ಟದಲ್ಲಿ ಕಳಪೆಯಾಗಿದೆ. ಈ ವಿಚಾರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ (ಸಿಜೆ), ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ.
ಟೆಕ್ ದೈತ್ಯ ಆಳವಾದ ಬೊಕ್ಕಸವನ್ನು ಹೊಂದಿರುವ ಕಂಪನಿಯಾಗಿರಬಹುದು. ಆದರೆ, ಜನರು ತಮ್ಮ ಗೌಪ್ಯತೆಯನ್ನು ಹಣಕ್ಕಿಂತ ಹೆಚ್ಚು ಗೌರವಿಸುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಡೇಟಾ ಹಂಚಿಕೆ ಬಗ್ಗೆ ಜನರಿಗೆ ತೀವ್ರ ಆತಂಕವಿದೆ. ಯುರೋಪಿಯನ್ ಬಳಕೆದಾರರಿಗೆ ಹೋಲಿಸಿದರೆ ಹೊಸ ಗೌಪ್ಯತೆ ನೀತಿಯು ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಹಾಳು ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ವರ್ಷ ಜನವರಿಯಲ್ಲಿ ಭಾರತದಲ್ಲಿ ಪರಿಚಯಿಸಲಾದ ವಾಟ್ಸ್ಆ್ಯಪ್ನ ಇತ್ತೀಚಿನ ಗೌಪ್ಯತೆ ನೀತಿಯನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸ್ಪಂದಿಸಲು ಕೋರಿ ಸುಪ್ರೀಂಕೋರ್ಟ್ ಫೇಸ್‌ಬುಕ್ ಮತ್ತು ವಾಟ್ಸ್ಆ್ಯಪ್ಗೆ ನೋಟಿಸ್ ನೀಡಿದೆ.
ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿಕೆ ಮಾಡಿ ಸುಪ್ರೀಂಕೋರ್ಟ್ ಆದೇಶಿಸಿದೆ.