ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri IAS) ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಐಪಿಎಸ್ ಅಧಿಕಾರಿ ಡಿ.ರೂಪಾ (D Roopa IPS) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ನಿರ್ದೇಶನ ನೀಡಿದೆ. ಎಲ್ಲ ಪೋಸ್ಟ್‌ಗಳನ್ನು ಅಳಿಸುವುದು ಅಸಾಧ್ಯವಾದರೆ, ರೋಹಿಣಿ ಸಿಂಧೂರಿ ವಿರುದ್ಧದ ಎಲ್ಲ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಕನಿಷ್ಠ ಪಕ್ಷ ಪೋಸ್ಟ್ ವೊಂದನ್ನು ಹಾಕುವಂತೆ ಡಿ.ರೂಪಾ ಅವರಿಗೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.
ರೋಹಿಣಿ ಸಿಂಧೂರಿ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿ ಡಿ.ರೂಪಾ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ, ರೋಹಿಣಿ ಸಿಂಧೂರಿ ಕುರಿತಾದ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ನಾಳೆಯೊಳಗೆ ಅಳಿಸಿ ಹಾಕುವಂತೆ ಡಿ.ರೂಪಾ ಅವರಿಗೆ ಮೌಖಿಕ ನಿರ್ದೇಶನ ನೀಡಿತು.
ಕರ್ನಾಟಕದ ಉನ್ನತ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ನಡುವೆ ಬಹಿರಂಗ ಜಟಾಪಟಿ ನಡೆದಿತ್ತು. ಐಎಎಸ್ ಅಧಿಕಾರಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದ ಡಿ.ರೂಪಾ ಅವರು ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಕೊಂಡಿದ್ದರು. ನಂತರ ಮಾನನಷ್ಟ ಆರೋಪದ ಮೇಲೆ ರೂಪಾ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಸಿಂಧೂರಿ ಹೂಡಿದ್ದರು.
ಇಬ್ಬರೂ ಅಧಿಕಾರಿಗಳು ತಮ್ಮ ವಿವಾದಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ನಿನ್ನೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ಇಂದು ಸಂಧಾನ ವಿಫಲವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ಇಬ್ಬರೂ ಅಧಿಕಾರಿಗಳು ಸಹ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿ, ರೂಪಾ ಬಹಿರಂಗ ಜಟಾಪಟಿ; ರಾಜ್ಯ ಸರ್ಕಾರದಿಂದ ನೋಟಿಸ್ ಜಾರಿ