ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಸಜ್ಜಾಗಿದೆ. ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಆಯ್ಕೆಯಾಗಿದ್ದು, ನಾಳೆ (ಭಾನುವಾರ) ಬೆಳಗ್ಗೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 68 ಸ್ಥಾನಗಳ ಪೈಕಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದೆ. ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಹಲವು ಸುತ್ತಿನ ಸಭೆ ನಡೆಸಿ ಕೊನೆಗೆ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಅಂತಿಮಗೊಳಿಸಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಬಣಗಳ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಒಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿದ್ದು, ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಮುಖೇಶ್ ಅಗ್ನಿಹೋತ್ರಿ ಡಿಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ಶಾಸಕಾಂಗ ಪಕ್ಷದ ಸಭೆದ ನಂತರ ಎಐಸಿಸಿ ವೀಕ್ಷಕರಾದ ಛತ್ತೀಸ್‌ಗಢದ ಸಿಎಂ ಭೂಪೇಶ್ ಬಘೇಲ್ ಸುದ್ದಿಗಾರರೊಂದಿಗೆ ಮಾತನಾಡಿ, ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಭಾನುವಾರ ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖೇಶ್ ಅಗ್ನಿಹೋತ್ರಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ನಿಯೋಜಿತ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಾತನಾಡಿ, ಹೊಸ ಜವಾಬ್ದಾರಿ ನೀಡಿದ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಜ್ಯದ ಜನತೆಗೆ ನಾನು ಕೃತಜ್ಞನಾಗಿದ್ದೇನೆ. ಹಿಮಾಚಲದಲ್ಲಿ ನಮ್ಮ ಸರ್ಕಾರ ಬದಲಾವಣೆ ತರಲಿದೆ. ರಾಜ್ಯದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜೊತೆಗೆ ನಿಯೋಜಿತ ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ನಾನು ತಂಡವಾಗಿ ಕೆಲಸ ಮಾಡುತ್ತೇವೆ. ನಾನು ನನ್ನ 17 ನೇ ವಯಸ್ಸಿನಲ್ಲಿ ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದೇನೆ. ಕಾಂಗ್ರೆಸ್ ಪಕ್ಷವು ನನಗೆ ವಹಿಸಿರುವ ಹೊಣೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸುಖು ಹೇಳಿದರು.
ಇದನ್ನೂ ಓದಿ: ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್.. 2ನೇ ಬಾರಿಗೆ ಸಿಎಂ ಪಟ್ಟ