ರಾಜ್ಕೋಟ್(ಗುಜರಾತ್): ಧೈರ್ಯಂ ಸರ್ವತ್ರ ಸಾಧನಂ. ಇದನ್ನು ನಂಬಿದರೆ ಭಯ ಅನ್ನೋದು ನಮ್ಮ ಹತ್ತಿರವೂ ಸುಳಿಯಲ್ಲ. ಗುಜರಾತ್ನ ರಾಜ್ಕೋಟ್ನಲ್ಲಿ ನಾಯಿಯೊಂದು ಇದನ್ನ ಸಾಬೀತು ಮಾಡಿದೆ. ತನ್ನ ಎದುರಿಗಿದ್ದಿದ್ದು ಕಾಡಿನ ರಾಜ ಸಿಂಹ ಅನ್ನೋದನ್ನೂ ಲೆಕ್ಕಿಸದೇ ಶ್ವಾನವೇ ಸಿಂಹವನ್ನು ಅಟ್ಟಿಸಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಕೋಟ್ ನಗರದಿಂದ 30 ಕಿ.ಮೀ ದೂರದಲ್ಲಿರುವ ಲೋಧಿಕಾ ಪ್ರದೇಶದಲ್ಲಿ ಎರಡು ಸಿಂಹಗಳು ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿವೆ. ಇವು ಆ ಪ್ರದೇಶದ ಗ್ರಾಮಗಳಿಗೂ ಲಗ್ಗೆ ಇಡುತ್ತಿವೆ. ಹೀಗೆ ಗ್ರಾಮ ಸಮೀಪ ಬಂದಿದ್ದ ಸಿಂಹವನ್ನು ಶ್ವಾನವೊಂದು ಅಟ್ಟಿಸಿಕೊಂಡು ಹೋಗಿದೆ. ನಾಯಿಯನ್ನು ಕಂಡು ಸಿಂಹವೇ ಬಾಲ ಮುದುರಿಕೊಂಡು ಓಟಕ್ಕಿತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಸಿಂಹವನ್ನು ಕಂಡ ಕೂಡಲೇ ಶ್ವಾನ ಬೊಗಳಲು ಶುರು ಮಾಡಿದೆ. ಇದನ್ನು ನೋಡಿದ ಸಿಂಹ ತಪ್ಪಿಸಿಕೊಂಡು ಓಡುತ್ತಿದೆ. ಸಿಂಹದ ಹಿಂದೆಯೇ ಆ ನಾಯಿ ಅಟ್ಟಿಸಿಕೊಂಡು ಹೋಗಿದೆ. ಸಿಂಹ ಸುಸ್ತಾಗಿ ನಿಂತರೂ ಬಿಡದ ನಾಯಿ ಬೊಗಳುತ್ತಲೇ ಹೆದರಿಸಿದೆ. ಇದನ್ನು ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ.
ಕಡು ಬೇಸಿಗೆಯಿಂದಾಗಿ ಗಿರ್ ಅರಣ್ಯ ಪ್ರದೇಶದಲ್ಲಿ ಆಹಾರದ ಮತ್ತು ನೀರಿನ ಕೊರತೆಯಿಂದಾಗಿ ಸಿಂಹಗಳು ಗ್ರಾಮಗಳತ್ತ ನುಗ್ಗುತ್ತಿವೆ. ಇದರಿಂದ ಭಯಭೀತರಾದ ಜನರು ಕೃಷಿ ಕೆಲಸಕ್ಕೂ ಹೋಗಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೂ ಜನರು ದೂರು ನೀಡಿದ್ದಾರೆ.
ಓದಿ: 'ದೇಶದ್ರೋಹ ಕಾನೂನು' ತಡೆಹಿಡಿದ ಸುಪ್ರೀಂಕೋರ್ಟ್; ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ, ರಾಜ್ಯಗಳಿಗೆ ಆದೇಶ