ಹೈದರಾಬಾದ್: ಸಾವು ಸಹಜವಾಗಿ ಬರುತ್ತೆ. ಅದಕ್ಕಾಗಿ ದಿನಾಂಕ ಗೊತ್ತು ಮಾಡಿಕೊಂಡು ಯಾರೂ ಸಾಯಲ್ಲ. ಆದರೆ, ತೆಲಂಗಾಣದ ವಿದ್ಯಾರ್ಥಿಯೊಬ್ಬ ತನ್ನ ಸಾವಿನ ದಿನಾಂಕವನ್ನು ತಾನೇ ನಿಗದಿ ಮಾಡಿಕೊಂಡಿದ್ದಾನೆ. ಅಲ್ಲದೇ, ಅಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಇದು ತಿಳಿದು ಬಂದಿದೆ.
ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ 10 ನೇ ತರಗತಿ ವಿದ್ಯಾರ್ಥಿಯೊಬ್ಬ ನಿನ್ನೆ (ಜುಲೈ 20) ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾನೆ. ಇದಕ್ಕೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೂ, ಮೊಬೈಲ್ಗಾಗಿ ವಿದ್ಯಾರ್ಥಿ ಈ ನಿರ್ಧಾರಕ್ಕೆ ಬಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಇನ್ಸ್ಟಾದಲ್ಲಿತ್ತು ಸಾವಿನ ದಿನಾಂಕ: ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಶಿವಲೋಕೇಶ್(14) ಮೊಬೈಲ್ ಗೀಳು ಹಚ್ಚಿಕೊಂಡಿದ್ದ. ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನಿಲ್ಲದ ಆಸಕ್ತಿ ಬೆಳೆಸಿಕೊಂಡಿದ್ದನಂತೆ. ಆತ್ಮಹತ್ಯೆಗೂ ಮೊದಲು ತನ್ನ ಗೆಳೆಯನಿಗೆ ಇನ್ಸ್ಟಾಗ್ರಾಮ್ ಮೂಲಕ ಜನ್ಮದಿನದ ಶುಭ ಕೋರಿದ್ದಾನೆ. ಈ ವೇಳೆ ಆತನ ಗೆಳೆಯ ಶಿವಲೋಕೇಶ್ನ ಪ್ರೊಫೈಲ್ ಪರಿಶೀಲಿಸಿದಾಗ ಸಾವಿನ ದಿನಾಂಕ ನಮೂದಿಸಿರುವುದನ್ನು ಕಂಡಿದ್ದಾನೆ.
ಮೊದಲಿಗೆ ತಮಾಷೆಗೆ ಈ ರೀತಿ ಮಾಡಿರಬಹುದು ಎಂದು ನಿರ್ಲಕ್ಷಿಸಿದ್ದ. ಆದರೆ, ಮರುದಿನವೇ ಶಿವಲೋಕೇಶ್ ನೇಣಿಗೆ ಶರಣಾದ ಸುದ್ದಿ ಬಂದಿದೆ. ಘಟನೆಯ ಬಳಿಕ ಶಿವಲೋಕೇಶ್ನ ಗೆಳೆಯ ಈ ಬಗ್ಗೆ ಮಾಹಿತಿ ಉಸುರಿದ್ದಾನೆ. ಇನ್ಸ್ಟಾಗ್ರಾಮ್ನಲ್ಲಿ ಮೊದಲೇ ಸಾವಿನ ದಿನಾಂಕವನ್ನು ಆತ ನಮೂದಿಸಿದ್ದ. ಇದನ್ನು ನಾನು ತಮಾಷೆ ಎಂದುಕೊಂಡಿದ್ದಾಗಿ ಆತ ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಕಾರಣ ಪತ್ತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿರೂರು ಟೋಲ್ ಕಂಬಕ್ಕೆ ಡಿಕ್ಕಿಯಾದ ಆ್ಯಂಬುಲೆನ್ಸ್; ನಾಲ್ವರು ದಾರುಣ ಸಾವು...ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ