ಮಾನವ ಕುಲಕ್ಕೆ 21ನೇ ಶತಮಾನದಲ್ಲಿ ಎದುರಾದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸವಾಲೆಂದರೆ ಕೋವಿಡ್-19 ಸಾಂಕ್ರಾಮಿಕ ರೋಗ. ಸುಮಾರು ಒಂದು ವರ್ಷಗಳಿಗೂ ಹೆಚ್ಚಿನ ಶ್ರಮದ ಬಳಿಕ, ಈ ರೋಗಕ್ಕೆ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ. ಈ ಲಸಿಕೆ ಬಳಕೆಯಲ್ಲಿ ಜಾಗತಿಕವಾಗಿ ನಾವು ಯಾವ ಸ್ಥಾನದಲ್ಲಿದ್ದೇವೆ? ಇಲ್ಲಿದೆ ಈ ಕುರಿತ ವರದಿ.
ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಭಾರತವು ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಬ್ರಿಟನ್ ಬಳಿಕ ಮೂರನೇ ಸ್ಥಾನದಲ್ಲಿದೆ ಎನ್ನುತ್ತವೆ ಅಂಕಿ ಅಂಶಗಳು. ಆದರೆ ಈ ಲಸಿಕೆ ಕಾರ್ಯಕ್ರಮದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದಲ್ಲಿ ಈ ಕಾರ್ಯಕ್ರಮ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಅಂಶ ನಿಶ್ಚಯವಾಗುತ್ತದೆ. ಅಮೆರಿಕದಲ್ಲಿ ಐದೂವರೆ ಕೋಟಿಗಿಂತಲೂ ಹೆಚ್ಚು ಲಸಿಕೆಗಳನ್ನು ಈಗಾಗಲೇ ಹಾಕಲಾಗಿದೆ. ಈ ಪ್ರಮಾಣ ಬ್ರಿಟನ್ನಲ್ಲಿ 1.6 ಕೋಟಿ ದಾಟಿದೆ. ಆದರೆ, ಭಾರತದಲ್ಲಿ ಈವರೆಗೆ ಕೇವಲ 90 ಲಕ್ಷ ಡೋಸ್ಗಳನ್ನು ಮಾತ್ರ ಹಾಕಲಾಗಿದೆ.
ಲಸಿಕೆ ಕಾರ್ಯಕ್ರಮ ಆರಂಭವಾಗಿ ಒಂದು ತಿಂಗಳು ಕಳೆದ ಬಳಿಕವೂ ಭಾರತದ ಪ್ರಗತಿ ಈ ನಿಟ್ಟಿನಲ್ಲಿ ಕುಂಟುತ್ತಾ ಸಾಗಿದೆ. ಈ ನಡುವೆ, ಅಮೆರಿಕ 12 ರೀತಿಯ 480 ಕೋಟಿ ಡೋಸ್ನಷ್ಟು ಕೋವಿಡ್ ಲಸಿಕೆ ತಯಾರಿಸುವ ಗುರಿ ಹೊಂದಿದೆ. ಈ ಪ್ರಮಾಣ ಭಾರತದಲ್ಲಿ 360 ಕೋಟಿ ಡೋಸ್‌ಗಳು. ಲಸಿಕೆ ಉತ್ಪಾದನಾ ಪ್ರಮಾಣ ಹಾಗೂ ಬಳಕೆ ಪ್ರಮಾಣದ ನಡುವಣ ಹೆಚ್ಚುತ್ತಿರುವ ಅಂತರ, ತುರ್ತು ಕ್ರಮದ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ.
ಕೋವಿಡ್ ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ. ಈ ಹಿನ್ನೆಲೆ, ಕೋವಿನ್ ಎಂಬ ಆ್ಯಪ್ ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ, ಎಲ್ಲರಿಗೂ ಹಂತ ಹಂತವಾಗಿ ಈ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಈ ಲಸಿಕೆ ಕಾರ್ಯಕ್ರಮದ ಅನ್ವಯ, ಮುಂಚೂಣಿ ಅರೋಗ್ಯ ಕಾರ್ಯಕರ್ತರಿಗೆ ಮೊದಲಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ. ಅವರ ಬಳಿಕ ಮುಂದಿನ ಹಂತದಲ್ಲಿ 50 ವರ್ಷಕ್ಕಿಂತ ಮೇಲಿನ ವಯಸ್ಸಿನ ದೇಶದ ಪ್ರಜೆಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಇದು ಎರಡನೇ ಹಂತದಲ್ಲಿ, ಮುಂದಿನ ತಿಂಗಳು ಆರಂಭವಾಗುವ ನಿರೀಕ್ಷೆ ಇದೆ.
ಆದರೆ, ಸರ್ಕಾರ ವ್ಯವಸ್ಥಿತವಾಗಿ ಲಸಿಕೆ ಕಾರ್ಯಕ್ರಮ ಆರಂಭಿಸಿದ್ದರೂ, ಅದರ ವೇಗ ತೀರಾ ಕಡಿಮೆಯಾಗಿದೆ. ಈ ವೇಗದಲ್ಲಿ ಲಸಿಕೆ ನೀಡುತ್ತಾ ಹೋದರೆ, ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲು ಸುಮಾರು ಐದು ವರ್ಷಗಳೇ ಬೇಕಾಗಬಹುದು. ಅದರಲ್ಲೂ ಇದು ಗ್ರಾಮೀಣ ಭಾಗದ ಜನರಿಗೆ ತಲುಪಲು ತುಂಬಾ ಸಮಯ ತೆಗೆದುಕೊಳ್ಳಬಹುದು. ಕೋವಿಡ್-19 ಲಸಿಕೆಯ ಅವಧಿ ಅದು ಉತ್ಪಾದನೆಗೊಂಡ ಆರು ತಿಂಗಳಲ್ಲಿ ಮುಗಿಯಲಿದೆ. ಈ ಅವಧಿಯಲ್ಲಿ ಅದರ ಬಳಕೆ ಆಗದಿದ್ದರೆ, ಅದು ಎಲ್ಲರಿಗೂ ನಷ್ಟ.
ಇದರ ಜೊತೆಗಿನ ಇನ್ನೊಂದು ಸಮಸ್ಯೆ ಎಂದರೆ, ಸರ್ಕಾರದಿಂದ ಆದ್ಯತೆಯ ಮೇರೆಗೆ ಗುರುತಿಸಲ್ಪಟ್ಟ ಹಲವಾರು ಮಂದಿ ಈ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದು. ಅವರಲ್ಲಿನ ಅಂಜಿಕೆಗಳು, ಅನುಮಾನಗಳು, ಅವರನ್ನು ಲಸಿಕೆ ತೆಗೆದುಕೊಳ್ಳದಂತೆ ಮಾಡಿವೆ. ಹೀಗಾಗಿ, ಲಸಿಕೆ ಶಿಬಿರಗಳತ್ತ ತುಂಬಾ ಜನ ಹೆಜ್ಜೆ ಇಡುತ್ತಿಲ್ಲ. ಎಲ್ಲರು ಲಸಿಕೆ ತೆಗೆದುಕೊಳ್ಳುವಂತೆ ಮಾಡುವುದು ಸರ್ಕಾರದ ಮುಂದಿನ ಇನ್ನೊಂದು ದೊಡ್ಡ ಸವಾಲು.
ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಮಯ ಈಗ ಒದಗಿ ಬಂದಿದೆ. ದೀರ್ಘಕಾಲದ ಕಾಯಿಲೆ ಇರುವ ವ್ಯಕ್ತಿಗಳು ಸಹ ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವುದು ಜನರ ಸಾಮಾಜಿಕ ಜವಾಬ್ದಾರಿ ಎಂದು ಅರಿವು ಮೂಡಿಸಬೇಕು. ಈಗಾಗಲೇ ಒಮ್ಮೆಯೇ ಕೋವಿಡ್ ಬಂದವರಲ್ಲಿ ಸಹ ಮತ್ತೊಮ್ಮೆ ಕೋವಿಡ್ ಮರುಕಳಿಸುವಿಕೆಯ ಉದಾಹರಣೆಗಳಿವೆ. ಸಿಎಸ್ಐಆರ್ ಸೆಂಟರ್ ಫಾರ್ ಸೆಲ್ಲ್ಯುಲರ್ ಅಂಡ್ ಮೊಲೆಕ್ಯುಲರ್ ಬಯಾಲಜಿ, ಹೈದರಾಬಾದ್ನ ತಜ್ಞರ ಸಂಶೋಧನೆಗಳು ಇದನ್ನು ಪುಷ್ಟಿಕರಿಸಿವೆ. ಈ ನಿಟ್ಟಿನಲ್ಲಿ ಜನರು ಇನ್ನಷ್ಟು ದಿನ ಜಾಗರೂಕತೆಯಿಂದ ಇರಬೇಕಿದೆ.
ಯುರೋಪಿನ ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್ಸ್ ಮತ್ತು ಪೋರ್ಚುಗಲ್ನಂತಹ ರಾಷ್ಟ್ರಗಳು ಈ ಹಿಂದೆ ಕೋವಿಡ್ ವಿರುದ್ಧ ಜಯ ಗಳಿಸಿದ್ದವು. ಆದರೆ, ಈಗ ಮತ್ತೆ ಅಲ್ಲಿ ವೈರಸ್ ಕಾಟ ಆರಂಭವಾಗಿದ್ದು, ಎಲ್ಲೆಡೆ ಮತ್ತೆ ಕೋವಿಡ್-19 ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮತ್ತೆ ಲಾಕ್‌ಡೌನ್ ಸದ್ದು ಕೇಳಿಸುತ್ತಿದೆ. ಇನ್ನು ನಮ್ಮ ದೇಶದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗುವ ಸೂಚನೆಗಳಿವೆ. ಈ ಹಿನ್ನಲೆಯಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಪ್ರಸ್ತಾಪಗಳು ಕೇಳಿ ಬರುತ್ತಿವೆ. ಮುಂಬೈನಂತಹ ನಗರದಲ್ಲಿ ಈ ಬಗ್ಗೆ ಈಗಾಗಲೇ ಎಚ್ಚರಿಕೆಯ ಕರೆಗಂಟೆ ಮೊಳಗಿಸಲಾಗಿದೆ.
ದುರಂತವೆಂದರೆ, ಕೋವಿಡ್ ಲಸಿಕೆಯ ಆಗಮನದೊಂದಿಗೆ ಅನಗತ್ಯವಾದ ಆತ್ಮಸ್ಥೈರ್ಯವು ಎಲ್ಲೆಡೆ ಕಂಡು ಬರುತ್ತಿದೆ. ಇದು ಹುಂಬ ಧೈರ್ಯ. ಏಕೆಂದರೆ, ಇದು ಮತ್ತೆ ಕೋವಿಡ್ ಎರಡನೇ ಅಲೆಯ ಸೃಷ್ಟಿಗೆ ಕಾರಣವಾಗಬಲ್ಲದು. ಲಸಿಕೆ ದೊರೆತಿದೆ ಎಂಬ ಧೈರ್ಯದಲ್ಲಿ ಜನ ಸಾಮಾನ್ಯರು ಮುಖಗವುಸು, ಸಾಮಾಜಿಕ ಅಂತರ, ಹೀಗೆ ನಾನಾ ಕೋವಿಡ್ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಕಿವಿ ಮಾತು ಹೇಳಿದೆ. ಕೋವಿಡ್ನಿಂದ ಎಲ್ಲರೂ ಸುರಕ್ಷಿತರಾಗುವವರೆಗೂ ಯಾರೂ ತಮ್ಮನ್ನು ಸುರಕ್ಷಿತರೆಂದು ಪರಿಗಣಿಸಲ್ಪಡುವುದು ತಪ್ಪು. ಈ ಹಿನ್ನಲೆ ರಾಜ್ಯ ಹಾಗು ಕೇಂದ್ರದ ಜವಾಬ್ದಾರಿ ಹೆಚ್ಚಿದೆ.
ಕೋವಿಡ್ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಲಸಿಕೆ ಬಗೆಗಿರುವ ಆತಂಕಗಳನ್ನು ಜನ ಸಾಮಾನ್ಯರ ಮನಸ್ಸಿನಿಂದ ಹೊಡೆದೋಡಿಸಬೇಕು. ಜನರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನು ಸ್ವಲ್ಪ ದಿನ ಮುಂದುವರೆಸುವಂತೆ ಅವರನ್ನು ಪ್ರೇರೇಪಿಸಬೇಕು. ಮುಖಗವುಸು, ಸಾಮಾಜಿಕ ಅಂತರ ಕಾಪಾಡುವಿಕೆ, ಕೈ ಸ್ವಚ್ಛತೆ ಹೀಗೆ ನಾನಾ ಕೋವಿಡ್ ನಿಯಂತ್ರಣ ಕ್ರಮಗಳನ್ನು ಎಲ್ಲರು ಪಾಲಿಸುವಂತೆ ಮಾಡಬೇಕಿದೆ.
ಪುಣೆಯ ಸೀರಮ್ ಮತ್ತು ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆಗಳು ಲಸಿಕೆಗಳನ್ನು ದೇಶೀಯವಾಗಿ ಉತ್ಪಾದಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಎರಡು ಸಂಸ್ಥೆಗಳು ನಮ್ಮ ದೇಶದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ. ಇದು ಸರಿ. ಈ ಎರಡು ಲಸಿಕೆಗಳ ಜೊತೆಗೆ, ಇನ್ನೂ ಕೆಲವು ಲಸಿಕೆಗಳು ದೇಶದಲ್ಲಿ ಬಳಕೆಗೆ ದೊರೆಯಲಿದೆ ಎಂದು ಕೇಂದ್ರ ತಿಳಿಸಿದೆ. ಈ ಹಿನ್ನೆಲೆ ಸರ್ಕಾರದ ಮುಂದಿರುವ ಜವಾಬ್ದಾರಿಯೆಂದರೆ, ಈ ಲಸಿಕೆಗಳು ಸರಿಯಾಗಿ ಎಲ್ಲರಿಗೂ ದೊರೆಯುವಂತೆ ಮಾಡುವುದು. ಜೊತೆಗೆ, ಉತ್ಪಾದನೆ ಹಾಗು ಬಳಕೆ ಪ್ರಮಾಣದಲ್ಲಿ ಸಮತೋಲನ ಸಾಧಿಸುವುದು.
ಇದರ ಜೊತೆಗೆ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಗೊಂಡ ಲಸಿಕೆಗಳನ್ನು ಮಾರಾಟ ಮಾಡಲು ಸರ್ಕಾರ ಲಸಿಕೆ ಉತ್ಪಾದನಾ ಸಂಸ್ಥೆಗಳಿಗೆ ಅವಕಾಶ ನೀಡಬೇಕು. ಇದು ಸಾರ್ವಜನಿಕರಿಗೆ, ಲಸಿಕೆ ಸುಲಭವಾಗಿ ದೊರೆಯುವಂತೆ ಮಾಡುತ್ತದೆ. ಈ ನಡುವೆ, 2013ರ ಕಂಪನಿಗಳ ಕಾಯ್ದೆಯ ಪ್ರಕಾರ ಸತತ ಮೂರು ವರ್ಷ ಲಾಭಗಳಿಸುವ ಸಂಸ್ಥೆಗಳು ತಮ್ಮ ಲಾಭಾಂಶದ ಶೇಕಡ 2 ಭಾಗವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಾಮಾಜಿಕ ಚಟುವಟಿಕೆಗಳಿಗಾಗಿ ಬಳಸಬೇಕು. ಈ ಮೊತ್ತವನ್ನು ಲಸಿಕೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆ ಭಾರತೀಯ ಕೈಗಾರಿಕೆಗಳ ಒಕ್ಕೂಟವು ತಮ್ಮ ನೌಕರರ ಲಸಿಕೆ ಕಾರ್ಯಕ್ರಮ ಕೈಗೊಳ್ಳಲು ಈ ಮೊತ್ತ ವಿನಿಯೋಗಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಇದರ ಜೊತೆಗೆ, ಖಾಸಗಿ ಆಸ್ಪತ್ರೆಗಳನ್ನು ಸಹ ಈ ಕಾರ್ಯಕ್ರಮದ ಪಾಲುದಾರರನ್ನಾಗಿ ಮಾಡಿದರೆ, ಲಸಿಕಾ ಕಾರ್ಯಕ್ರಮ ಹೆಚ್ಚು ವ್ಯಾಪಕವಾಗಬಹುದು. ಇದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಂತಿಮ ಜಯವನ್ನು ನಮ್ಮದಾಗಿಸಬಲ್ಲದು.