ಚೆನ್ನೈ: ತಮಿಳುನಾಡಿನಲ್ಲಿ ವೇದಾಂತ ಲಿಮಿಟೆಡ್ ಒಡೆತನದ ಸ್ಟರ್ಲೈಟ್ ಕಾಪರ್ ಪ್ಲಾಂಟ್ ಇತ್ತೀಚೆಗೆ ವೈದ್ಯಕೀಯ ಆಮ್ಲಜನಕದ ಉತ್ಪಾದನೆಯನ್ನು ಪ್ರಾರಂಭಿಸಿದೆ. ಸ್ಥಾವರದಲ್ಲಿನ ಕೋಲ್ಡ್ ಬಾಕ್ಸ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಆಕ್ಸಿಜನ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಮೂರು ವರ್ಷಗಳಿಂದ ಸ್ಥಾವರದತ್ತ ಗಮನ ಹರಿಸದ ಕಾರಣ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಮಸ್ಯೆ ಬಗೆಹರಿಸುವ ಸಲುವಾಗಿ ತಾಂತ್ರಿಕ ತಜ್ಞರ ಗುಂಪು ಸ್ಥಳದಲ್ಲಿಯೇ ಬೀಡು ಬಿಟ್ಟಿದೆ. ಶೀಘ್ರದಲ್ಲೇ ಎಲ್ಲಾ ಸರಿಪಡಿಸಿ ಆಮ್ಲಜನಕ ಉತ್ಪಾದನೆಯನ್ನು ಶುರು ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ನಿತ್ಯ ಎರಡು ಟ್ಯಾಂಕರ್ ಆಕ್ಸಿಜನ್ ಅನ್ನು ರವಾನಿಸಲಾಗುತ್ತಿದ್ದು, ಇದು ಶೇಕಡಾ 98.6 ರಷ್ಟು ಶುದ್ಧತೆಯನ್ನು ಹೊಂದಿದೆ ಎಂದು ದೃಢಪಟ್ಟಿದೆ.
ಟುಟಿಕೋರಿನ್‌ನಲ್ಲಿರುವ ಸೌಲಭ್ಯದಲ್ಲಿ ನಾಲ್ಕು ತಿಂಗಳ ಅವಧಿಗೆ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲು ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕಕ್ಕೆ ಏಪ್ರಿಲ್ 26 ರಂದು ಸರ್ವಪಕ್ಷ ಸಭೆಯಲ್ಲಿ ಅಂದಿನ ಎಐಎಡಿಎಂಕೆ ಸರ್ಕಾರ ಅನುಮೋದನೆ ನೀಡಿತ್ತು.