ಶ್ರೀನಗರ (ಜಮ್ಮು-ಕಾಶ್ಮೀರ): ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ 15 ಜನ ಆರೋಪಿಗಳನ್ನು ಶ್ರೀನಗರದ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಉಗ್ರರೊಂದಿಗೆ ಗುಂಡಿನ ಚಕಮಕಿ ವೇಳೆ ನಾಗರಿಕರ ಸುರಕ್ಷತೆಗೆ ಶ್ರಮಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಮೇಲೆಯೇ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು.
ಶ್ರೀನಗರದ ನೌಗಮ್ನಲ್ಲಿ ಮಾ.16ರಂದು ಮೂರು ಉಗ್ರರನ್ನು ಭದ್ರತಾ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದರು. ಈ ವೇಳೆ ನಾಗರಿಕರ ಸುರಕ್ಷತೆಗಾಗಿ ಪ್ರದೇಶವನ್ನು ತೆರವು ಮಾಡಲಾಗಿತ್ತು.
ಆಗ ದೊಡ್ಡಮೊಟ್ಟದ ಗುಂಪೊಂದು ಸೇರಿ ಭದ್ರತಾ ಸಿಬ್ಬಂದಿ ಮೇಲೆಯೇ ಕಲ್ಲು ತೂರಾಟ ಮಾಡಲು ಶುರು ಮಾಡಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕಲ್ಲು ತೂರಾಟ ನಡೆಸಿದ 15 ಜನ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಎನ್ಕೌಂಟರ್ ನಡೆದ ಬಳಿಕ ನಿಯಮ ಅನುಸಾರ ಇಡೀ ಪ್ರದೇಶದಲ್ಲಿ ನಾಗರಿಕರ ಸುರಕ್ಷತೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಗುಂಪೊಂದು ಲಾಠಿಗಳು ಮತ್ತು ಕಲ್ಲುಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಕಲ್ಲುಗಳನ್ನು ತೂರಾಟ ನಡೆಸಿತ್ತು.
ಅಲ್ಲದೇ, ಯಾವುದೇ ಎನ್ಕೌಂಟರ್ ಸಮಯದಲ್ಲಿ ಸುರಕ್ಷತೆಗಾಗಿ ನಾಗರಿಕರು ಆ ಸ್ಥಳದಲ್ಲಿ ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಲು ದೂರವಾಗಿ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಬ್ಯಾಂಡ್ನಲ್ಲಿ ಸಖತ್ ಆಗಿ ಮೂಡಿ ಬಂದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು!